ಶಿರಸಿ: ಜೀವಲ ಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ಕೆರೆ ಹೆಬ್ಬಾರ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಹೆಬ್ಬಾರ 66ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಅಭಿಮಾನಿಗಳು ಹಾಗೂ ಜೀವ ಜಲ ಕಾರ್ಯಪಡೆ ಸದಸ್ಯರು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ನಗರದ ಮರಾಠಿಕೊಪ್ಪದ ಅಂಜನಾದ್ರಿ ಬೆಟ್ಟದ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಅಲ್ಲದೇ ನೇತ್ರದಾನಕ್ಕೆ ಸಹಿ ಮಾಡಿದರು. ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ, ಸರ್ವ ದಾನದಲ್ಲೂ ರಕ್ತದಾನ ಶ್ರೇಷ್ಠ ದಾನವಾಗಿದ್ದು, ಶ್ರೀನಿವಾಸ ಹೆಬ್ಬಾರ ಜನ್ಮ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಂಡು ಇನ್ನೊಬ್ಬರ ಜೀವ ಉಳಿಸುವುದಕ್ಕೆ ನೆರವಾಗುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಜಲ ಯೋಧರಾಗಿ ರಾಜ್ಯದಲ್ಲಿ ಹೆಸರು ಮಾಡಿದ ಶ್ರೀನಿವಾಸ ಹೆಬ್ಬಾರ ಸಾಕಷ್ಟು ಕೆರೆಗಳನ್ನು ಅಭಿವೃದ್ಧಿ ಮಾಡಿ ಜಲಮೂಲಗಳನ್ನು ಉಳಿಸುವ ಪ್ರಯತ್ನ ನಮಗೆಲ್ಲರಿಗೂ ಮಾದರಿ ಎಂದರು. ಈ ಸಂದರ್ಭದಲ್ಲಿ ಕೆ.ಎಂ.ಎಫ್. ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಅಂಜನಾದ್ರಿ ದೇವಾಲಯದ ಅಧ್ಯಕ್ಷ ಕಿರಣ ಚಿತ್ರಕಾರ, ಡಾ.ಸುಮನ್, ಡಾ.ಶಿವರಾಮ, ಡಾ.ಮುಂಜುನಾಥ ,ವಿ.ಪಿ ಹೆಗಡೆ ವೈಶಾಲಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಅಭಿಮಾನಿಗಳು ಶ್ರೀನಿವಾಸ ಹೆಬ್ಬಾರ್ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದರು.