ಶಿರಸಿ: ವಿವೇಕಾನಂದ ನಗರದ ಶ್ರೀವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಡಳಿತ ಮಂಡಳಿ, ಮಾತೃ ಮಂಡಳಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಭಾಗಿತ್ವದಲ್ಲಿ ಪ್ರೊ.ಎಚ್.ಆರ್.ಅಮರನಾಥ ವಿರಚಿತ ‘ಶಂಕರಗಣ ವಿಲಾಸ’ ನೂತನ ತಾಳಮದ್ದಲೆ ಪ್ರಸಂಗ ನೆರವೇರಿತು.
ಶಂಕರಚಾರ್ಯರು ತಮ್ಮ ನಾಲ್ವರು ಶಿಷ್ಯರಿಗೆ ಪುನರ್ನಾಮಕರಣ ಮಾಡುತ್ತಾರೆ. ಅವರ ಸ್ವಾನುಭವದ ಹಿನ್ನೆಲೆಯಲ್ಲಿ ತಾತ್ವಿಕ ಜಿಜ್ಞಾಸೆ ಮೂಡಿಸುವ ಜ್ಞಾನಮಾರ್ಗ- ಕರ್ಮಮಾರ್ಗ, ಭಕ್ತಿಮಾರ್ಗ- ತಂತ್ರಮಾರ್ಗ ಇತ್ಯಾದಿ ವಿಚಾರ ಮಂಥನಗಳಿoದ ವಾದೇ ವಾದೇ ಜಾಯತೆ ತತ್ವ ಬೋಧವನ್ನು ಸಾಕ್ಷಾತ್ಕರಿಸಿಕೊಳ್ಳುವ ಹಿನ್ನೆಲೆಯ ಕಥನವುಳ್ಳ ‘ಶಂಕರಗಣ ವಿಲಾಸ’ ತಾಳ ಮದ್ದಲೆ ಪ್ರಸಂಗವಿದಾಗಿದ್ದು, ಹಿಮ್ಮೇಳ ಭಾಗವತರು ಗಜಾನನ ಭಟ್ಟ ತುಳಗೇರಿ, ಮದ್ದಲೆ ಶ್ರೀಪತಿ ಹೆಗಡೆ ಕಂಚೀಮನೆ ಮತ್ತು ಮುಮ್ಮೇಳದಲ್ಲಿ ಗಣಪತಿಯಾಗಿ ಜಯರಾಮ ಭಟ್ಟ ಗುಂಜಗೋಡ, ಈಶ್ವರ(ಶಂಕರ)ನಾಗಿ ಮಹೇಶ ಭಟ್ಟ ಇಡಗುಂದಿ, ಹಸ್ತಾಮಲಕ(ಕಲಬದರ) ಪಾತ್ರದಲ್ಲಿ ಶ್ರೀನಿವಾಸ ಮತ್ತಿಘಟ್ಟ, ಪದ್ಮಪಾದ (ಪದಕಮಲ)ದಲ್ಲಿ ಮಂಜುನಾಥ ಗೊರಮನೆ, ಸುರೇಶ್ವರ(ದೇವೇಂದ್ರ) ಪಾತ್ರ ನಿರ್ವಹಣೆಯಲ್ಲಿ ಸುಬ್ರಾಯ ಹೆಗಡೆ ಕೆರೆಕೊಪ್ಪ, ತೋಟಕನಾಗಿ ಶ್ರೀಪಾದ ಹೆಗಡೆ ಭಟ್ಟರಕೇರಿ ತಮ್ಮ ತಮ್ಮ ಪಾತ್ರ ನಿರ್ವಹಣೆಯನ್ನು ಉತ್ತಮವಾಗಿ ಅಭಿವ್ಯಕ್ತಿಗೊಳಿಸಿ ರಂಜಿಸಿದರು.
ಕೃಷ್ಣ ಪದಕಿ ಅವರು ಪ್ರಾಸ್ತಾವಿಕವಾಗಿ ಮಾತಾಡಿ ಪರಿಚಯಿಸಿದರು. ಜಗದೀಶ ನಾ.ಭಂಡಾರಿ, ಲಕ್ಷ್ಮಣ ಹೆಗಡೆ ಮತ್ತು ಡಿ.ಎಸ್.ನಾಯ್ಕ ಕವಿ ಪ್ರೊ.ಎಚ್.ಆರ್.ಅಮರನಾಥ ಅವರನ್ನು ಸನ್ಮಾನಿಸಿದರು. ಎಚ್.ಆರ್.ಅಮರನಾಥ ಅವರಿಂದ ವಂದನಾರ್ಪಣೆ ನಡೆಯಿತು.