ಗೋಕರ್ಣ : ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆ ಉಂಟಾಗಿದ್ದು, ಇನ್ನು ತಗ್ಗು ಪ್ರದೇಶದಲ್ಲಿ ನೀರು ನಿಂತಿರುವುದರಿಂದ ಈ ಬಾರಿ ಕೃಷಿ ಚಟುವಟಿಕೆ ನಡೆಯುವ ಸಾಧ್ಯತೆ ಕಡಿಮೆಯಿದೆ. ಹಾಗೇ ಗಂಗಾವಳಿ ನದಿನೀರು ಕೂಡ ಏರಿಕೆಯಾಗುತ್ತಿರುವುದರಿಂದ ಅಕ್ಕಪಕ್ಕದ ನಿವಾಸಿಗಳು ಕೂಡ ಆತಂಕದಿಂದಲೇ ದಿನಕಳೆಯುವಂತಾಗಿದೆ.
ಬಾರಿ ಮಳೆಯಿಂದಾಗಿ ಸಾಕಷ್ಟು ಕಡೆಗಳಲ್ಲಿ ಸಣ್ಣಪುಟ್ಟ ಹಳ್ಳಗಳು ಜೋರಾಗಿ ಹರಿಯುತ್ತಿರುವುದರಿಂದ ಸ್ಥಳೀಯರಿಗೆ ಹಳ್ಳ ದಾಟುವುದು ಒಂದು ಸಾಹಸವಾಗಿದ್ದು, ಇನ್ನು ಗ್ರಾಮೀಣ ಭಾಗಗಳಲ್ಲಿ ಜನರು ತಾವೇ ಅಡಿಕೆ ದಬ್ಬೆ ಅಥವಾ ಇನ್ನಿತರ ಉಪಕರಣಗಳಿಂದ ಕಾಲು ಸಂಕವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇನ್ನು ಶಾಲಾ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮತ್ತು ಪುನಃ ವಾಪಸ್ ಕರೆದುಕೊಂಡು ಬರಲು ಪಾಲಕರು ತೆರಳಬೇಕಾದ ಪರಿಸ್ಥಿತಿಯಿದೆ.
ತಾಲೂಕಿನ ಅರಣ್ಯದಂಚಿನಲ್ಲಿರುವ ಸಾಕಷ್ಟು ಗ್ರಾಮೀಣ ಭಾಗಗಳಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಕುರಿತು ಮಳೆಗಾಲದಲ್ಲಿ ನೀರು ಹರಿಯುವುದರಿಂದ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಕಾಲುಸಂಕ ನಿರ್ಮಿಸಿಕೊಡುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಅನೇಕ ಬಾರಿ ಸ್ಥಳೀಯರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.