ಕಾರವಾರ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಹೊಸ ಯೋಜನೆ ನೀಡದೆ ಸರ್ಕಾರ ಅನ್ಯಾಯ ಎಸಗಿದೆ ಎಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಲಾಗಿದ್ದ ಜನಪರ ಹಾಗೂ ತುರ್ತು ಯೋಜನೆಗಳನ್ನು ಈ ಬಜೆಟ್ ನಲ್ಲಿ ಕೈಬಿಡಲಾಗಿದೆ. ಇದರಿಂದ ಇದೊಂದು ಜನವಿರೋಧಿ ಬಜೆಟ್ ಆಗಿದೆ. ಜಿಲ್ಲೆಗೆ ಅತಿ ಅವಶ್ಯವಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಿರಂತರ ಹೋರಾಟ ನಡೆಸಲಾಗಿತ್ತು. ಜನತೆಯ ಭಾವನೆ, ತುರ್ತು ಅಗತ್ಯತೆಗೆ ಗಮನ ಕೊಡದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವನ್ನೇ ಮಾಡಲಾಗಿಲ್ಲ. ಇದರಿಂದ ತೀವ್ರ ಅಸಮಾಧಾನ, ನೋವನ್ನು ಉಂಟುಮಾಡಿದೆ.
ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಆದರೆ ಮೀನುಗಾರರಿಗೆ ಅನುಕೂಲಕರವಾದ ಈ ಯೋಜನೆಯನ್ನೂ ಬಜೆಟ್ ನಲ್ಲಿ ಕೈಬಿಡಲಾಗಿದೆ. ಕೇಣಿಯಲ್ಲಿನ ಗ್ರೀನ್ ಫೀಲ್ಡ್ ಬಂದರು ಹಾಗೂ ಮೆಡಿಕಲ್ ಕಾಲೇಜಿನಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹಿಂದಿನ ಸರ್ಕಾರದ ಯೋಜನೆಯಾಗಿದೆ. ವಿವಿಧೆಡೆ ತೆರಿಗೆಯನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ಈ ಬಜೆಟ್ ಇನ್ನಷ್ಟು ದುರ್ಬರವಾಗಿಸಿದೆ. ಒಂದು ಕಡೆ ಕೊಟ್ಟಂತೆ ಮಾಡಿ ಇನ್ನೊಂದು ಕಡೆಯಿಂದ ಕಸಿದುಕೊಳ್ಳುವ ಬಜೆಟ್ ಇದಾಗಿದೆ.
ಈ ಸರ್ಕಾರ ಬಡವರು, ಮೀನುಗಾರರು, ಕೃಷಿಕರು, ಜನಸಾಮಾನ್ಯರಿಗೆ ಉಪಯುಕ್ತವಾದ ಯಾವುದೇ ಯೋಜನೆಯನ್ನೂ ಕ್ಷೇತ್ರಕ್ಕೆ ನೀಡದೆ ತಾರತಮ್ಯ ಮಾಡಿದೆ ಎಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಆರೋಪಿಸಿದ್ದಾರೆ.