ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯು ತನ್ನ ಸಿ.ಎಸ್.ಆರ್. ಯೋಜನೆಯ ಮೂಲಕ 5 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಗಾಂಧೀನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತ್ಯಾಧುನೀಕ ತಂತ್ರಜ್ಞಾನದ ರಕ್ತ ತಪಾಸಣಾ ಯಂತ್ರ ಮತ್ತು ಇನ್ನಿತರ ಆರೋಗ್ಯ ಪರೀಕ್ಷಾ ಪರಿಕರಗಳನ್ನು ಬುಧವಾರ ಹಸ್ತಾಂತರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ, ಕಾಗದ ಕಾರ್ಖಾನೆಯು ತನ್ನ ಸಿ.ಎಸ್.ಆರ್ ಯೋಜನೆಯ ಮೂಲಕ ಸಾರ್ವಜನಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ವಿಶೇಷ ನೆರವನ್ನು ನೀಡುತ್ತಲೆ ಬಂದಿದೆ. ಇಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತೀ ಅವಶ್ಯವಾಗಿ ಬೇಕಾಗಿದ್ದ ರಕ್ತ ತಪಾಸಣಾ ಯಂತ್ರಕ್ಕೆ ಬೇಡಿಕೆ ಬಂದಿತ್ತು. ಬೇಡಿಕೆಯನ್ನು ಕಾರ್ಖಾನೆಯ ಕರ‍್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಅವರು ಮಾನ್ಯ ಮಾಡಿ ಮಂಜೂರು ಮಾಡಿದ್ದಾರೆ. ಇಂದು ಇದನ್ನು ವಿದ್ಯುಕ್ತವಾಗಿ ಹಸ್ತಾಂತರಿಸುತ್ತಿದ್ದು, ಸ್ಥಳೀಯ ಜನತೆಗೆ ಇದರ ಲಾಭ ದೊರೆಯುವಂತಾಗಲೆಂದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿವೇಣಿಯವರು ಮಾತನಾಡಿ, ನಮ್ಮ ಮನವಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ಅತೀ ಶೀಘ್ರದಲ್ಲಿ ಸ್ಪಂದಿಸಿರುವುದರ ಜೊತೆಗೆ ಇಲ್ಲಿಯ ಜನತೆಯ ಬಗ್ಗೆ ಆರೋಗ್ಯ ಕಾಳಜಿಯನ್ನು ಮೆರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ.ಜೆ.ಆರ್, ಸಾರ್ವಜನಿಕ ಸಂಪರ್ಕ ವಿಭಾಗದ ಖಲೀಲ್ ಕುಲಕರ್ಣಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮಹಾಂತೇಶ್ ಪಾಟೀಲ್, ರೀಟಾ ಡಿಸೋಜಾ, ಶಾಂತಿಕಾ ಮುಕ್ರಿ, ಆರತಿ, ಕಿರಣ್ ಮೊದಲಾದವರು ಉಪಸ್ಥಿತರಿದ್ದರು.