ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ಗುರುಪೂರ್ಣಿಮೆ ನಿಮಿತ್ತ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಕರೆದು ಅವರಿಗೆ ಮಕ್ಕಳಿಂದ ಪಾದಪೂಜೆ ಮಾಡಿಸಿ ಸಂಸ್ಥೆಯ ಕಡೆಯಿಂದ ಸನ್ಮಾನ ಮಾಡಿ ಗುರು ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಕ್ಷಣ ಪ್ರೇಮಿಗಳು ಹಳೆಯ ಪಾಲಕರಾದ ಸತೀಶ್ ನಾಯ್ಕ ಉಮ್ಮಚ್ಚಗಿ ಮಾತನಾಡುತ್ತಾ ಇವತ್ತಿನ ಕಾರ್ಯಕ್ರಮದ ಬಗ್ಗೆ ತುಂಬಾ ಹೆಮ್ಮೆ ಇದೆ ನಮ್ಮ ಪ್ರೌಢಶಾಲೆಯ ಶಿಕ್ಷಕರು ತಾವು ಗೌರವ ಪಡೆಯುವುದನ್ನು ಬಿಟ್ಟು ಒಂದು ಹೆಜ್ಜೆ ಮುಂದೆ ಸಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಮತ್ತೋರ್ವ ಅತಿಥಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಧರ್ ನಾಯಕ್ ಮಾತನಾಡುತ್ತಾ ಕಲಿಸಿದ ಗುರುಗಳನ್ನು ನಮಿಸುವುದು ಮಕ್ಕಳ ನಿತ್ಯ ರೂಢಿ ಆಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್ಎಂ ಹೆಗಡೆ ಹುಡೆಲಕೊಪ್ಪ ಮಾತನಾಡುತ್ತಾ, ಮಕ್ಕಳಲ್ಲಿ ಸಂಸ್ಕಾರ ಮೊಳಕೆ ಒಡೆಯಬೇಕು ಗುರುಗಳನ್ನು ಗೌರವಿಸುವ ಗುಣ ವಿದ್ಯಾರ್ಥಿ ದೆಸೆಯಿಂದ ಆರಂಭಿಸಿ ಜೀವನಾರಾಧ್ಯ ಇರಬೇಕು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕಿ ಸಂಧ್ಯಾ ಹೆಗಡೆ, ನಾನು ಈ ಶಾಲೆಯ ವಿದ್ಯಾರ್ಥಿ ಅಲ್ಲದೆ ಈಗ ಇಲ್ಲಿಯೇ ಗೌರವಿಸಲ್ಪಡುತ್ತಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಭಾವುಕರಾದರು. ಪ್ರಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಭಟ್ ವಾನಳ್ಳಿ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಗುರುಪೂರ್ಣಿಮೆಯ ಅರ್ಥಪೂರ್ಣ ಆಚರಣೆ ಹೇಗೆ ಎಂದು ವಿಚಾರಿಸುತ್ತಿರುವಾಗ ಇಲ್ಲಿಯವರೆಗೆ ಕಲಿಸಿ ಮಕ್ಕಳನ್ನು ನಮಗೆ ಕಳುಹಿಸಿಕೊಟ್ಟ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗೌರವಿಸುತ್ತಿರುವುದು ನಮಗೆ ಹೆಮ್ಮೆ ಮತ್ತು ಕರ್ತವ್ಯ ಅಲ್ಲದೆ ಮಕ್ಕಳಲ್ಲಿ ಸಂಸ್ಕಾರ ಮೊಳಕೆ ಒಡೆಯಬೇಕು ಎಂದರೆ ಇಂತಹ ಕಾರ್ಯಕ್ರಮದ ಅಗತ್ಯವಿದೆ ಎಂದರು. ಶಿಕ್ಷಕ ಲೋಕನಾಥ ಹರಿಕಂತ್ರ ವಂದಿಸಿದರೆ,ಬಿ.ಎಂ.ಭಜಂತ್ರಿ ಮತ್ತು ಗಣೇಶ ಸಾಯಿಮನೆ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರು, ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು