ಜೊಯಿಡಾ: ತಾಲೂಕಿನಲ್ಲಿ ಅತಿಥಿ ಶಿಕ್ಷಕರ ಕೊರತೆಯಿಂದಾಗಿ ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದರು ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ.
ಗುಡ್ಡಗಾಡು ಮತ್ತು ಕಾಡಿನ ಪ್ರದೇಶವಾದ ತಾಲೂಕಿನಲ್ಲಿ ಅತಿಥಿ ಶಿಕ್ಷಕರು ಇಲ್ಲದೆ ಕೆಲ ಶಾಲೆಗಳಿಗೆ ಸಮಸ್ಯೆ ಉಂಟಾಗಿದೆ. ಈಗಾಗಲೇ ತಾಲೂಕಿನ 157 ಪ್ರಾಥಮಿಕ ಹಾಗೂ 17 ಪ್ರೌಢಶಾಲೆಗಳಿಗೆ 103 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದ್ದು, ಇನ್ನೂ 100ಕ್ಕೂ ಹೆಚ್ಚಿನ ಅತಿಥಿ ಶಿಕ್ಷಕರ ಕೊರತೆ ಇದೆ. ಶಾಲೆ ಪ್ರಾರಂಭವಾಗಿ ತಿಂಗಳಾದರು ಸಹಿತ ಖಾಲಿ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕನ್ನು ಏಕೆ ನೇಮಕ ಮಾಡಿಕೊಂಡಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಜೊಯಿಡಾ ಕೆಲ ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಅಲ್ಲದೆ ವರ್ಷವೂ ತಾಲೂಕಿನ ಕೆಲ ಪ್ರೌಢಶಾಲೆಗಳು 100% ಫಲಿತಾಂಶ ಪಡೆಯುತ್ತಿದ್ದು, ಮಕ್ಕಳಿಗೆ ಮೂಲಸೌಕರ್ಯಗಳು ಸರಿಯಾಗಿ ಸಿಗದೆ ಇದ್ದರು ಕೂಡಾ ಉತ್ತಮ ಅಂಕಗಳನ್ನು ಮಕ್ಕಳು ಸಾಧಿಸುತ್ತಿದ್ದಾರೆ. ಆದರೆ ಈಗ ಪ್ರೌಢಶಾಲೆಗಳಿಗೆ ಅವಶ್ಯವಿದ್ದಷ್ಟು ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಕೆ ತೆಗೆದುಕೊಳ್ಳದ ಕಾರಣ ಇದು ಮುಂದೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಪ್ರೌಢಶಾಲೆಗಳಲ್ಲಿ ಎಲ್ಲಾ ವಿಷಯಗಳಿಗೆ ಶಿಕ್ಷಕರು ಇಲ್ಲದೇ ಹೋದರೆ ಇದ್ದ ಶಿಕ್ಷರೇ ಎಲ್ಲಾ ವಿಷಯಗಳನ್ನು ಹೇಳಿಕೊಡುವುದರಿಂದ ಶಿಕ್ಷಕರಿಗೆ ತೊಂದರೆ ಉಂಟಾಗುತ್ತಿದೆ.
ಈ ಬಗ್ಗೆ ತಾಲೂಕಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಲಕ್ಷ್ಯ ವಹಿಸಿ ಕೂಡಲೇ ಜೊಯಿಡಾ ತಾಲೂಕಿಗೆ ಅವಶ್ಯವಿದ್ದಷ್ಟು ಅತಿಥಿ ಶಿಕ್ಷಕರನ್ನು ನೇಮಿಸಿ ಮಕ್ಕಳು ಶಿಕ್ಷಣ ವಂಚಿತರಾಗದoತೆ ನೋಡಿಕೊಳ್ಳಬೇಕಿದೆ.