ಶಿರಸಿ: ಕುಮಟಾ- ಶಿರಸಿ ಸಂಪರ್ಕ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು, ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಿಂದ ಹಾಗೂ ಮಳೆಯಿಂದ ಆತಂಕವಿಲ್ಲದ ವಾಹನ ಸಂಚಾರಕ್ಕೆ ಹಾಗೂ ಅಪಘಾತವಾಗದ ರೀತಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ದಿನನಿತ್ಯ ಸಾವಿರಾರು ವಾಹನಗಳು ಪೂರ್ಣಗೊಳ್ಳದ ಕಾಮಗಾರಿ ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಅಪಾಯ ಸಂಭವಿಸುವ ಪೂರ್ವದಲ್ಲಿಯೇ ಜಿಲ್ಲಾಡಳಿತ ಜಾಗೃತೆ ವಹಿಸುವುದು ಅತೀ ಅವಶ್ಯವೆಂದು ಅವರು ಹೇಳಿದರು.
ಮಳೆಯಿಂದ ಪೂರ್ಣಗೊಳ್ಳದ ರಸ್ತೆಯನ್ನು ಸಂಚಾರಕ್ಕೆ ಅನುಕೂಲವಾಗುವಂತೆ ನೀರು ತುಂಬಿದ ಹೊಂಡ-ತಗ್ಗು ಪ್ರದೇಶದ ರಸ್ತೆಯನ್ನು ಸಮತಟ್ಟು ಮಾಡುವ ತುರ್ತು ಕಾಮಗಾರಿ ಜರುಗುತ್ತಿದ್ದರೂ, ತೀವ್ರ ಮಳೆಯಿಂದ ಕುಸಿಯುವ ಹಾಗೂ ಏಕರಸ್ತೆಯಲ್ಲಿ ದ್ವಿಮುಖದಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಅಪಾಯ ಸಂಭವಿಸುವ ಭೀತಿ ಉಂಟಾಗುತ್ತಿದೆ. ಕಾಮಗಾರಿಯ ಅಕ್ಕಪಕ್ಕದಲ್ಲಿ ಹೆಚ್ಚಿನ ಸುಕ್ಷರತೆಗೆ ಗಮನವಹಿಸುವುದು ಅತೀ ಅವಶ್ಯವೆಂದು ಅವರು ಜಿಲ್ಲಾಡಳಿತಕ್ಕೆ ಕೋರಿದ್ದಾರೆ.
30 ಕೀ.ಮೀ ರಸ್ತೆ ಪೂರ್ಣ: ಶಿರಸಿ-ಕುಮಟಾ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದರೂ, ಅಂದಾಜು 30 ಕೀ.ಮೀನಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡು, ಇನ್ನೂ ಬಾಕಿಯಿರುವ ಅರ್ಧದಷ್ಟು ರಸ್ತೆ ಕಾಮಗಾರಿ ಆದಷ್ಟು ಬೇಗ ಮುಗಿದು ಸಾರ್ವಜನಿಕ ಅನುಕೂಲಕ್ಕೆ ಅವಕಾಶ ಮಾಡಿಕೊಡಬೇಕೆಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ