ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮ ಬಾಡಲಕೊಪ್ಪ ಮತ್ತು ಖಾಸಾಪಾಲ ಮಜರೆಗಳ ಮಧ್ಯದಲ್ಲಿರುವ ಮುಂಡಿಗೆ ಕೆರೆಯ ತುಂಬೆಲ್ಲ ಸುಮಾರು 300ಕ್ಕೂ ಮೇಲ್ಪಟ್ಟು ಬೆಳ್ಳಕ್ಕಿಗಳು ಬಂದಿಳಿದಿವೆ. ಹೀಗಾಗಿ ಇದು ಮುಂಗಾರಿನ ಮುನ್ಸೂಚನೆ ಎಂದು ಹೇಳಲಾಗಿದೆ.
ಪ್ರತಿ ವರ್ಷದಂತೆ ಬೆಳ್ಳಕ್ಕಿಗಳು ಕಳೆದ ಮೇ ತಿಂಗಳ 31ಕ್ಕೆ ಮೊದಲ ಬಾರಿಗೆ ಸಮೀಕ್ಷೆಗೆ 2 ಪಕ್ಷಿಗಳು ಬಂದು ನಂತರದ ದಿನಗಳಲ್ಲಿ ಅವುಗಳ ಸಂಖ್ಯೆ 25ರಿಂದ 31ಕ್ಕೆ ಏರಿದವು. ಸಮೀಕ್ಷೆಯನ್ನು ಮುಂಜಾನೆ ಮತ್ತು ಸಂಜೆ ವೇಳೆ ಕೆರೆಯ ಮೇಲ್ಗಡೆ ಸುತ್ತುತ್ತ ಹಾರಾಟ ನಡೆಸಿ, ಪಕ್ಕದ ಎತ್ತರದ ಮರದ ಮೇಲೆ ಕುಳಿತು ಹಾಗೆ ಹಾರಿ ಹೋಗುತ್ತಿದ್ದವು. ಈ ಪ್ರಕ್ರಿಯೆ ಜೂನ್ 1ರಿಂದ 15ರವರೆಗೆ ನಿತ್ಯ ನಡೆಸುತ್ತಿದ್ದು, ಜೂನ್ 20ರಿಂದ ಸುಮಾರು 200ಕ್ಕೂ ಅಧಿಕ ಬೆಳ್ಳಕ್ಕಿಗಳು ಕೆರೆಯಲ್ಲಿ ಸಂಜೆ 7 ಗಂಟೆಯ ಸಮೀಕ್ಷೆಯಂತೆ ಮುಂಡಿಗೆ ಗಿಡಗಳ ಮೇಲೆ ವಸತಿ ಮಾಡಿರುವುದು ಕಂಡುಬಂದಿದೆ. ಅವುಗಳಲ್ಲಿ ಸುಮಾರು 20-25 ಪಕ್ಷಿ ಪುನಃ ಹಾರಿಹೋಗಿ ಉಳಿದ ಪಕ್ಷಿಗಳು ಮುಂಡಿಗೆ ಕೆರೆಯಲ್ಲಿ ವಸತಿ ಮಾಡಿವೆ.
ಮುಂಡಿಗೆ ಕೆರೆಯಲ್ಲಿ ಬೆಳ್ಳಕ್ಕಿಗಳು ರಾತ್ರಿ ವಸತಿ ಮಾಡಿದವು ಎಂದಾದರೆ ಮುಂದಿನ 5- 6 ದಿನಗಳಲ್ಲಿ ಮಳೆ ಗ್ಯಾರಂಟಿ. ಅಂದರೆ ಮುಂಗಾರು ಮಳೆ ಆಗಮನದ ಮುನ್ಸೂಚನೆ ಹೊತ್ತು ಈ ಬೆಳ್ಳಕ್ಕಿಗಳು ಕೆರೆಯಲ್ಲಿ ಇಳಿಯುತ್ತವೆ. ಆರಂಭದಲ್ಲಿ ಸಣ್ಣ-ಸಣ್ಣ ಮಳೆ ಆಗಿ ನಂತರ ಉತ್ತಮ ಮಳೆ ಆಗುತ್ತದೆ. ಇದು 1995ರಿಂದ ಸೋಂದಾ ಜಾಗೃತ ವೇದಿಕೆ ಕೈಗೊಂಡಿರುವ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಇನ್ನು 2-3 ದಿನಗಳಲ್ಲಿ ಇವು ಗೂಡು ಕಟ್ಟಲು ಅಕ್ಕ- ಪಕ್ಕದ ಬೆಟ್ಟ- ಕಾಡುಗಳಿಂದ ಕಡ್ಡಿ ಸಂಗ್ರಹಿಸಿ ತರುವ ಪ್ರಕ್ರಿಯೆಗೆ ಚಾಲನೆ ನೀಡಲಿವೆ. ಪಕ್ಷಿಗಳ ಆಗಮನ ಸಂಖ್ಯೆ ಗಮನಿಸಿದರೆ ಮುಂಗಾರು ಮಳೆ ತಡವಾದರೂ ಮುಂದಿನ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆ ಮಾಡಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮಳೆಗಾಲದಲ್ಲಿ ಅದೂ ಮುಂಡಿಗೆ ಸಸ್ಯಗಳ ಮೇಳೆ ಮೊಟ್ಟೆ ಇಟ್ಟು ಮರಿಮಾಡುವ ಏಕೈಕ ಪಕ್ಷಿಧಾಮ ಇದಾಗಿದೆ. ಇಲ್ಲಿಗೆ ಸಂತಾನಾಭಿವೃದ್ಧಿಗೆ ಬರುವ ಬೆಳ್ಳಕ್ಕಿಗಳು ಸ್ಥಳೀಯವಾಗಿದ್ದು, ಸುಮಾರು 10- 15 ಕಿ.ಮೀ. ವ್ಯಾಪ್ತಿಯಿಂದ ಬರುತ್ತವೆ. ಇದನ್ನು ಪಕ್ಷಿತಜ್ಞ ದಿ.ಪಿ.ಡಿ. ಸುದರ್ಶನ 1980ರಿಂದ ಹೊರ ಜಗತ್ತಿಗೆ ಪರಿಚಯಿಸಿದಾಗಿನಿಂದ ತಿಳಿಸುತ್ತ ದಾಖಲೆ ಬರೆದಿದ್ದಾರೆ. ಅದು ಈ ವರ್ಷದವರೆಗೂ ತಪ್ಪದೇ ಮುಂದುವರಿದುಕೊಂಡು ಬಂದಿರುತ್ತದೆ. ಮುಂದಿನ ತಿಂಗಳಿಂದ ಬೆಳ್ಳಕ್ಕಿಗಳ ಕಲರವ- ಹಾರಾಟವನ್ನು- ಮರಿಗಳ ಚೀರಾಟ ತೂರಾಟ – ತಳ್ಳಾಟ ನೋಡಿ ಆನಂದಿಸಲು ಜುಲೈ 20 ರ ನಂತರ ಮುಂಡಿಗೆ ಕೆರೆಗೆ ಬನ್ನೀ. ಇವು ಮುಂದಿನ ನವೆಂಬರ್ ವರೆಗೆ ಈ ಪ್ರದೇಶದಲ್ಲಿ ನೋಡಬಹುದಾಗಿದೆ.