ಗೋಕರ್ಣ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಒಂದಲ್ಲ ಒಂದು ಗೊಂದಲಗಳು ಸೃಷ್ಟಿಯಾಗಿ ರಾಜ್ಯದಲ್ಲಿ ಅಭಿವೃದ್ಧಿಗಿಂತ ಅಪಪ್ರಚಾರಗಳು, ವೈಯಕ್ತಿಕ ದೋಷಗಳು ಹೆಚ್ಚುತ್ತಿವೆ. ಆಡಳಿತ ಪಕ್ಷವಾದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪರಸ್ಪರ ಹೋರಾಟಗಳು ಬೀದಿ ಬೀದಿಗಳಲ್ಲಿ ಕಂಡುಬರುತ್ತಿವೆ. ಹೀಗಾಗಿ ಕ್ಷೇತ್ರ ಅಭಿವೃದ್ಧಿಗಿಂತ ಹೆಚ್ಚಾಗಿ ಉಚಿತ ಕೊಡುಗೆಗಾಗಿ ಹೆಚ್ಚಿನ ಹೊರೆ ಭರಿಸಬೇಕಾಗಿದೆ.
ಸರಕಾರ ಉಚಿತವಾಗಿ ಘೋಷಿಸಿದ ಪ್ರಮುಖ 5 ಬೇಡಿಕೆಗಳ ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾತ್ರ ಸಾಧ್ಯವಾಗಿದೆ. ಸದ್ಯ ರಾಜ್ಯದ ಯಾವ ಶಾಸಕರಿಗೂ ಅನುದಾನ ನೀಡಲು ಸಾಧ್ಯವಾಗದಿರುವುದಕ್ಕೆ ಯಾವುದೇ ಹೊಸ ಯೋಜನೆಗಳನ್ನು ಶಾಸಕರು ತಮ್ಮ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಇದರ ಪ್ರಯೋಜನ ಪಡೆದ ಬಿಜೆಪಿಯವರು ಇದನ್ನೇ ಅಸ್ತçವನ್ನಾಗಿಸಿಕೊಂಡು ಹೋರಾಟಕ್ಕಿಳಿದಿದ್ದಾರೆ. ಒಟ್ಟಿನಲ್ಲಿ ನಾ ಕೊಡೆ, ನೀ ಬಿಡೆ ಎನ್ನುವಂತಾಗಿದೆ. ಇದರಿಂದಾಗಿ ಶಾಸಕರು ಹಣೆ ಹಣೆ ಬಡಿದುಕೊಳ್ಳುವಂತಾಗಿದೆ.