ಹೊನ್ನಾವರ: ತಾಲೂಕಿನ ಖರ್ವಾ ಶ್ರೀಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗಾಗಿ ಒಂದು ದಿನದ ಇಂಗ್ಲಿಷ್ ಕಾರ್ಯಾಗಾರ ನಡೆಯಿತು. ಎಸ್.ಡಿ.ಎಂ. ಪದವಿ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಜಿ.ಪಿ.ಹೆಗಡೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿಕೊಟ್ಟರು.
ಇಂಗ್ಲಿಷ್ ಭಾಷೆಯ ಮಹತ್ವ, ಇತ್ತೀಚಿನ ದಿನಗಳಲ್ಲಿ ಅದರ ಅನಿವಾರ್ಯತೆ ಎಷ್ಟಿದೆ ಹಾಗೂ ಅದನ್ನು ಶಾಲಾ ಮಟ್ಟದಲ್ಲಿ ಯಾವ ರೀತಿ ಉಪಯೋಗಿಸಬೆಕು, ಇಂಗ್ಲೀಷ್ ಭಾಷೆಯನ್ನು ಕಲಿಯುವ ಸುಲಭ ವಿಧಾನಗಳ ಬಗ್ಗೆ ಜಿ.ಪಿ.ಹೆಗಡೆ ಸರಳವಾಗಿ ಶಿಕ್ಷಕರಿಗೆ ತಿಳಿಸಿದರು.
ಅದಲ್ಲದೇ ಇಂಗ್ಲೀಷ್ ಭಾಷೆಯನ್ನು ಬಳಸಲು ಉಪಯೋಗಿಸಬೇಕಾದ ವಿಧಾನಗಳು ಯಾವವು? ಅದನ್ನು ಹೇಗೆ ಬಳಕೆಗೆ ತರುವುದು? ಮಕ್ಕಳ ಜೊತೆ ಯಾವ ರೀತಿ ಇಂಗ್ಲೀಷ್‌ನಲ್ಲಿ ಮಾತನಾಡುವುದು, ಶಿಕ್ಷಕರಲ್ಲಿರುವ ಹಿಂಜರಿಕೆ ಮತ್ತು ಭಯದ ಸ್ವಭಾವವನ್ನು ಹೇಗೆ ಹೊಡೆದೋಡಿಸ ಬೇಕು ಎಂಬುವುದರ ಬಗ್ಗೆ ಸವಿಸ್ತಾರವಾಗಿ ಶಿಕ್ಷಕರಿಗೆ ಮನ ಮುಟ್ಟುವ ರೀತಿಯಲ್ಲಿ ತಿಳಿಸಿದರು.ಚಿಕ್ಕ ಮಗು ಹೇಗೆ ಒಂದು ಭಾಷೆಯನ್ನು ಕಲಿಯುತ್ತದೆಯೊ ಆ ರೀತಿಯಲ್ಲಿ ಕಲಿಯಬೇಕು.ಎಂದು ಶಿಕ್ಷಕರಿಗೆ ಪ್ರೇರಣಾ ದಾಯಕ ನುಡಿಗಳನ್ನು ಆಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ ಭಟ್ ಶಿವಾನಿ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಪಿ.ಜಿ.ಹೆಗಡೆ ವೇದಿಕೆ ಮೇಲೆ ಹಾಜರಿದ್ದರು. ಶಿಕ್ಷಕಿಯರಾದ ರೇಷ್ಮಾ ಸ್ವಾಗತಿಸಿದರು. ಅಪರ್ಣಾ ಶಾನಭಾಗ್ ವಂದಿಸಿದರು.