ಗೋಕರ್ಣ: ಗೋಕರ್ಣದ ಐವರು ಯುವಕರ ತಂಡ ಹಿಮಾಚಲ ಪ್ರದೇಶದ ಅತ್ಯಂತ ಎತ್ತರದ (17450 ಅಡಿ) ಪಾರ್ವತಿ ಮತ್ತು ಪಿನ್ ಕಣಿವೆ ಸಂಧಿ ಸ್ಥಳವನ್ನು ಏರಿ ಭಾರತದ ಬಾವುಟ ಹಾರಿಸುವ ಮೂಲಕ ಈ ಸಂಧಿ ಸ್ಥಳವನ್ನು ಮುಟ್ಟಿದ ವರ್ಷದ ಮೊದಲ ಪರ್ವತಾರೋಹಿ ತಂಡ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಗೋಕರ್ಣದ ಗಣೇಶ ಅಡಿ, ಮಹೇಶ ಹಿರೇಗಂಗೆ, ನಾಗಕುಮಾರ ಗೋಪಿ, ಶ್ರೀನಿಧಿ ಅಡಿ, ಧ್ರುವ ಎನ್.ಚಾಪಖಂಡ ಪರ್ವತಾರೋಹಿ ಯುವಕರಾಗಿದ್ದಾರೆ. ಇವರ ಜತೆ ಹಿಮಾಚಲದ ಒಬ್ಬ ಗೈಡ್ ಮತ್ತು 6 ಸಹಾಯಕರು ಚಾರಣದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಲಡಾಕ್, ಮಾನಸ ಸರೋವರ, ಹಿಮಾಲಯದ ವಿವಿಧ ಪ್ರದೇಶಗಳಿಗೆ ಚಾರಣ ಮಾಡಿದ್ದರು.
ಈ ಸ್ಥಳದಲ್ಲಿ -10 ಡಿಗ್ರಿ ತಾಪಮಾನವಿದ್ದು, ಈ ದುರ್ಗಮ ಪರ್ವತವನ್ನು ಏರಿ ಸಾಹಸ ಮೆರೆದಿದ್ದಾರೆ. ಅಲ್ಲಿನ ರಾಜ್ಯ ಸರಕಾರ ಈ ವರ್ಷದ ದಾಖಲೆಯಲ್ಲಿ ಗೋಕರ್ಣದ ಐವರ ಪಾರ್ವತಾರೋಹಿಗಳ ಹೆಸರು ನೋಂದಾಯಿಸಿಲ್ಪಟ್ಟಿರುವುದು ವಿಶೇಷ. ಹಿಮಾಲಯದ ಖಾಜಾ ವಲಯದ ಮುದ್ ಎಂಬ ಹಳ್ಳಿಯಿಂದ ಆರಂಭವಾಗುವ 120 ಕಿ.ಮೀ. ಕಾಲ್ನಡಿಗೆ ಚಾರಣವಾಗಿದೆ.