ಕಾರವಾರ: ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಸುಭಾಷ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಬಡವರ- ಜನ ವಿರೋಧಿ ನಡೆಯನ್ನು ಖಂಡಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳನ್ನು ಕಾಂಗ್ರೆಸ್ ಈಡೇರಿಸುತ್ತಿದೆ. ಅನ್ನಭಾಗ್ಯ ಯೋಜನೆ ಜಾರಿಗೆ ತರಲು ಕೇಂದ್ರದ ಬಿಜೆಪಿ ಸರ್ಕಾರ ಅಡ್ಡಗಾಲು ಹಾಕಿದೆ. ಆದರೂ ಪಟ್ಟುಬಿಡದೆ ಸಿದ್ದರಾಮಯ್ಯ ತೆಲಂಗಾಣದಿoದ ಅಕ್ಕಿ ಖರೀದಿಸಿ ಬಡವರಿಗೆ ಹಂಚಲು ಮುಂದಾಗಿದ್ದಾರೆ ಎಂದರು. ಶಕ್ತಿ ಯೋಜನೆಯಿಂದ ಆರ್ಥಿಕ ಚಟುವಟಿಕೆ ಗರಿಗೆದರುತ್ತಿದೆ. ಆರ್ಥಿಕವಾಗಿ ಸರ್ಕಾರಕ್ಕೆ ಹೊರೆಯಾಗುವ ಪ್ರಮೇಯ ಇಲ್ಲ ಎಂದರು.
ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಸರ್ಕಾರ ಸದಾ ಬಡವರ ಪರ ಯೋಚಿಸುತ್ತದೆ. ಬಡವರ ಅನ್ನಕ್ಕೆ ಕಲ್ಲು ಹಾಕುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ತನ್ನ ಸಣ್ಣತನ ತೋರಿಸಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ ಎಂದರು.
ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್, ಮುಖಂಡರಾದ ವಿ.ಎಸ್.ಪಾಟೀಲ, ಕೆ.ಶಂಭು ಶೆಟ್ಟಿ, ಸುಜಾತಾ ಗಾಂವಕರ, ಸಮೀರ ನಾಯ್ಕ, ಜಗದೀಪ ತೆಂಗೇರಿ, ರತ್ನಾಕರ ನಾಯ್ಕ, ಜಗದೀಶ ಗೌಡ, ಗಣೇಶ ದಾವಣಗೆರೆ, ಇತರರು ಇದ್ದರು.