ಹಳಿಯಾಳ: ತಾಲೂಕಿನ ಮುರ್ಕವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬoಧಪಟ್ಟoತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಆರೋಗ್ಯ ಕೇಂದ್ರದ ಎದುರು ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.
ಮುರ್ಕವಾಡ ಗ್ರಾಮದಿಂದ ಹಾದು ಹೋಗಿರುವ ಹಳಿಯಾಳ ಕಲಘಟಗಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮುರ್ಕವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಗ್ರಾಮಸ್ಥರು ರಸ್ತಾರೋಖೊ ಆರಂಭಿಸಿದಾಗ ಮಧ್ಯ ಪ್ರವೇಶಿಸಿದ ಪಿಎಸ್‌ಐ ವಿನೋದ ಎಸ್.ಕೆ., ಪ್ರತಿಭಟನಾ ನಿರತರಿಗೆ ರಸ್ತಾ ರೋಖೋ ಕೈಬಿಡಲು ಮನವೊಲಿಸಿ ಸಂಚಾರ ವ್ಯತ್ಯಯವಾಗದಂತೆ ನೋಡಿಕೊಂಡರು.
ಪ್ರತಿಭಟನಾಕಾರರು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7ಕ್ಕೂ ಹೆಚ್ಚು ಗ್ರಾಮಗಳು ಬರುತ್ತವೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡವಿದ್ದು, 247 ಸೇವೆ ಸಲ್ಲಿಸುತ್ತಿದೆ. ಆದರೆ ಅವ್ಯವಸ್ಥೆಯ ಆಗರವಾಗಿದೆ. ಹೀಗಾಗಿ ಈಗಾಗಲೇ ಈ ಕೇಂದ್ರಕ್ಕೆ ಮಂಜೂರಾಗಿರುವ ಹುದ್ದೆ ತುಂಬಬೇಕು. ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಿಸಬೇಕು ಮತ್ತು ಆಂಬುಲೆನ್ಸ್ ಪೊರೈಸಬೇಕು. ಸರ್ಕಾರದಿಂದ ತಜ್ಞ ನುರಿತ ಆರೋಗ್ಯ ವೈದ್ಯಾಧಿಕಾರಿ, ತಜ್ಞ ನುರಿತ ಮಹಿಳಾ ಮತ್ತು ಮಕ್ಕಳ ಆರೋಗ್ಯ ವೈದ್ಯಾಧಿಕಾರಿ, ಸ್ಟಾಫ್ ನರ್ಸ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಿಳಾ ಮತ್ತು ಪುರುಷ ಆರೋಗ್ಯ ನಿರೀಕ್ಷಕರು, ಪಥಮ ದರ್ಜೆ ಗುಮಾಸ್ತ ಹುದ್ದೆಗಳು ಮಂಜೂರಿ ಇದ್ದು, ಅವುಗಳನ್ನು 247ಕ್ಕೆ ಸಂಬoಧಿಸಿದ0ತೆ ಸರಕಾರ ಸಿಬ್ಬಂದಿಗಳನ್ನು ತುಂಬಿಲ್ಲ. ಇದರಿಂದ ಆರೋಗ್ಯ ಕೇಂದ್ರ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಈ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಮುರ್ಕವಾಡ, ಕೆ.ಕೆ.ಹಳ್ಳಿ, ಮುಗದಕೊಪ್ಪ, ಶಿವಪೂರ ಕಳಸಾಪೂರ, ಗೊಲೆಹಳ್ಳಿ, ಮುಂಡವಾಡ, ನಾಗಶೆಟ್ಟಿಕೊಪ್ಪ ಹಾಗೂ ಇತರೆ ಗ್ರಾಮಸ್ಥರ ಆರೋಗ್ಯ ದೃಷ್ಟಿಯಿಂದ ಸಹಕಾರಿಯಾಗಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುರ್ಕವಾಡದಲ್ಲಿ ಹೆರಿಗೆ ಆಗುತ್ತಿಲ್ಲ. ಸಣ್ಣಮಟ್ಟದ ಶಸ್ತ್ರ ಚಿಕಿತ್ಸೆ, ಮರಣೋತ್ತರ ಪರೀಕ್ಷೆಗಳು, ದಿರ್ಘ ಕಾಲ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಉಪಚಾರಕ್ಕೆ ತೀರಾ ಅಡ್ಡಿ ಉಂಟಾಗಿದ್ದು, ಈ ಎಲ್ಲ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಬೇಕೆಂದು ಒತ್ತಾಯಿಸಲಾಯಿತು.
ಒಂದು ತಿಂಗಳ ಗಡುವು: ಸಿಬ್ಬಂದಿ ವಸತಿಗೃಹಗಳ ದುರಸ್ಥಿ ಹಾಗೂ ನವೀಕರಣ ಆಗದೇ ಇರುವದರಿಂದ ಸಿಬ್ಬಂದಿಗಳ ನಿಯೋಜನೆಯಾದರೂ ಇಲ್ಲಿಗೆ ಸಿಬ್ಬಂದಿಗಳು ಬರಲು ನಿರಾಕರಿಸುವಂತಹ ಪರಿಸ್ಥಿತಿ ಇದ್ದು, ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ವಸತಿಗೃಹ ದುರಸ್ಥಿಪಡಿಸಬೇಕು ಎಂದು ಪ್ರತಿಭಟನಾಕಾರರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬೇಡಿಕೆ ಈಡೇರಿಸದೆ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ವೇಳೆ ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಂಬAಧಿಸಿದ ಎಲ್ಲಾ ಇಲಾಖೆಯ ಸಿಬ್ಬಂಧಿಗಳು ಹಾಜರಿದ್ದಿದ್ದು ವಿಶೇಷವಾಗಿತ್ತು. ಸಾಮಾಜಿಕ ಕಾರ್ಯಕರ್ತ ಮುರ್ಕವಾಡದ ನಾಗರಾಜ ಗೌಡ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುರ್ಕವಾಡ ಗ್ರಾ.ಪಂ ಅಧ್ಯಕ್ಷೆ ಕಾಂಚಾನಾ ಸುಳಗೇಕರ, ಉಪಾಧ್ಯಕ್ಷ ರಮೇಶ ಗೌಡ, ಪ್ರಮುಖರಾದ ಶ್ರೀನಾಥ ಬಳಿರಾಮ ಪಾಟೀಲ,ಮಾರುತಿ ಗುತ್ತೆಣ್ಣವರ, ಶಿವಾಜಿ ಗೌಡ, ಬಾಳು ಮಾಚಕ , ದಯಾನಂದ ವಡ್ಡರ,ಸತೀಶ ಗುತ್ತೆಣ್ಣವರ, ರವಿಚಂದ್ರ ಸಾಕಳಿ, ಭುಜಂಗ ಗೌಡ, ನಂದಾ ಕೊರ್ವೆಕರ, , ವಿನಾಯಕ ಮಾನೆ, ಅರುಣ ಕೊಳಾಂಬೆ, ಪುನೀತ ಮಾಚಕ ಇದ್ದರು.