ಸಿದ್ದಾಪುರ: ತಾಲೂಕಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ಜು.8ರಂದು ಲೋಕ ಅದಾಲತ್ ಹಮ್ಮಿಕೊಂಡಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಕಕ್ಷಿದಾರರು, ಸಾರ್ವಜನಿಕರು ಈ ಅದಾಲತ್‌ನಲ್ಲಿ ಪಾಲ್ಗೊಂಡು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮತಿಯ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ ತಿಳಿಸಿದರು.
ಅವರು ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ನೀಡಿ, ಈ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಂತಹ ಎಲ್ಲಾ ಚೆಕ್ ಬೌನ್ಸ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಮೋಟಾರುವಾಹನ ಅಫಘಾತ ಪರಿಹಾರದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು ಹಾಗೂ ರಾಜಿಯಾಗುವ ಎಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ರಾಜಿಪಡಿಸಿಕೊಳ್ಳುವದರಿಂದ ಹಣ,ಸಮಯ ವ್ಯರ್ಥವಾಗುವದಿಲ್ಲ. ವರ್ಷಗಟ್ಟಲೆ ಬಾಕಿ ಉಳಿದು ಕಕ್ಷಿದಾರರಿಗೆ ಮಾನಸಿಕ,ಆರ್ಥಿಕ ಹಿಂದೆಯಾಗುವದು ತಪ್ಪುತ್ತದೆ. ಅಲ್ಲದೇ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವದರಿಂದ ಎರಡೂ ಪಕ್ಷದವರಲ್ಲಿ ಉತ್ತಮ ಬಾಂಧವ್ಯ ಮೂಡುತ್ತದೆ. ವೈಮನಸ್ಸಿಗೆ ಅವಕಾಶವಿರುವದಿಲ್ಲ. ಸಾರ್ವಜನಿಕರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಇದರ ಸದುಪಯೋಗವಾಗಬೇಕು. ಎಂದು ಜಿ.ತಿಮ್ಮಯ್ಯ ತಿಳಿಸಿದರು.
ಈ ಹಿಂದಿನ ಲೋಕ ಅದಾಲತ್‌ಗಳಲ್ಲಿ ಕಕ್ಷಿದಾರರ, ನ್ಯಾಯವಾದಿಗಳ, ಅಭಿಯೋಜನಾ ಇಲಾಖೆ ಮತ್ತು ನ್ಯಾಯಾಲಯದ ಎಲ್ಲ ಹಂತದ ಸಿಬ್ಬಂದಿಗಳ ಉತ್ತಮ ಸಹಕಾರ ದೊರೆತಿದೆ. ಅಲ್ಲದೇ ಕಂದಾಯ,ಪೊಲೀಸ್,ಅರಣ್ಯ ಮುಂತಾಗಿ ಎಲ್ಲ ಇಲಾಖೆಗಳ ಮತ್ತು ಮಾಧ್ಯಮಕ್ಷೇತ್ರದ ಸಹಕಾರವೂ ದೊರೆತಿದೆ. ಈ ಅದಾಲತ್ ನಲ್ಲಿ ಇನ್ನಿತರ ಪ್ರಕರಣಗಳ ಜೊತೆಗೆ 80ಕ್ಕೂ ಹೆಚ್ಚು ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಪಡುವ ನಿರೀಕ್ಷೆಯಿದೆ. ಸಾರ್ವಜನಿಕರು ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.