ಕುಮಟಾ: ಇಲ್ಲಿನ ಪರಿಸರ ವಿಜ್ಞಾನಿ ಡಾ.ಎಂ.ಡಿ.ಸುಭಾಷ್‌ಚಂದ್ರನ್ ಅವರಿಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಪರಿಸರ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಖ್ಯಾತ ಪರಿಸರ ವಿಜ್ಞಾನಿ ಕುಮಟಾ ಹೊಸ ಹೆರವಟ್ಟಾದ ಡಾ. ಎಂ.ಡಿ. ಸುಭಾಷ್‌ಚಂದ್ರನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2022-23ನೇ `ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.
ಕರ್ನಾಟಕ ಸರ್ಕಾರ, ಅರಣ್ಯ, ಜೀವಿಪರಿಸರ ಮತ್ತು ಪರಿಸರ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಶ್ವ ಪರಿಸರ ದಿನಾಚರಣೆ-2023ರ ಪ್ರಯುಕ್ತ ನೀಡುವ `ಪರಿಸರ ಪ್ರಶಸ್ತಿ’ ಇದಾಗಿದೆ. ಇವರು ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಜೂ. 5 ರಂದು ಈ ಪ್ರಶಸ್ತಿ ನೀಡಿ ಗೌರವಿಸಿದೆ. ಡಾ. ಎಂ.ಡಿ. ಸುಭಾಷ್‌ಚಂದ್ರನ್ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನ ಪರಿಸರ ವಿಜ್ಞಾನ ಕೇಂದ್ರದಲ್ಲಿ ಸಂದರ್ಶಕ ವಿಜ್ಞಾನಿಯಾಗಿದ್ದು, ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದ ಸದಸ್ಯರಾಗಿಯೂ, ಕರಾವಳಿ ಮತ್ತು ಪಶ್ಚಿಮ ಘಟ್ಟದ ಪರಿಸರದ ಸಂಶೋಧನೆಯಲ್ಲಿ ಹಲವಾರು ಸಂಶೋಧನಾ ಪ್ರಭಂಧಗಳನ್ನು ಮತ್ತು ಲೇಖನಗಳನ್ನು ಬರೆದಿದ್ದಾರೆ. ಡಾ. ಎಂ.ಡಿ. ಸುಭಾಷ್‌ಚಂದ್ರನ್ ಅವರಿಗೆ ಸಂದ ಗೌರವಕ್ಕೆ ಅವರ ಅಪಾರ ಶಿಷ್ಯರು ಸಂತಸ ವ್ಯಕ್ತಪಡಿಸಿದ್ದಾರೆ.