ಶಿರಸಿ: ಕರ್ನಾಟಕ ಸರಕಾರ ಹೈನುಗಾರರನ್ನು ಉತ್ತೇಜಿಸುವ ಕಾರಣದಿಂದ ರಾಜ್ಯ ಸರಕಾರ ನೀಡುತ್ತಿದ್ದ ಪ್ರತೀ ಲೀಟರ್ ಗೆ ಐದು ರೂಪಾಯಿ ಸಹಾಯಧನ ಮೊತ್ತ ಕಳೆದ ಏಳು ತಿಂಗಳುಗಳಿಂದ ಬಂದಿಲ್ಲ. ರಾಜ್ಯ ಸರಕಾರವೇ ಇದ್ದು ಬಡ ಹೈನುಗಾರರ ಬಳಿ ಕೋಟಿ ರೂಪಾಯಿಗೂ ಅಧಿಕ ಬಾಕಿ ಇಟ್ಟುಕೊಂಡ ವಿಲಕ್ಷಣ ಸ್ಥಿತಿ ಇದಾಗಿದ್ದು, ತಕ್ಷಣ ಸರಕಾರ ಹೈನುಗಾರರ ನೆರವಿಗೆ ಧಾವಿಸಬೇಕು ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಒತ್ತಾಯಿಸಿದ್ದಾರೆ.
ಕಷ್ಟದಲ್ಲಿ ಇರುವ ಹೈನುಗಾರಿಕಾ ಕ್ಷೇತ್ರ ಉತ್ತೇಜಿಸಬೇಕು. ಕ್ಷೀರ ಕ್ರಾಂತಿ ಕರುನಾಡಿನಲ್ಲೂ ಆಗಬೇಕು ಎಂದು ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೂಲಕ ಹಾಲು ಹಾಕುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹ ಧನ ನೀಡುತ್ತಿತ್ತು. ಈ ಹಣ ಸಂಕಷ್ಟದ ಕಾಲದಲ್ಲಿ ವರದಾನವೇ ಆಗಿತ್ತು. ರೈತರ ಖಾತೆಗೇ ನೇರ ಹಣ ಹಾಕುವ ಈ ಯೋಜನೆಯಿಂದ ಹೈನುಗಾರಿಕಾ ವಲಯ ಕೂಡ ಸಂಕಷ್ಟಗಳ ಮಧ್ಯೆ ಉಳಿದುಕೊಂಡಿತ್ತು. ಆದರೆ, ಸರಕಾರದ 5 ರೂ ಲೀಟರ್ ಗೆ ಉತ್ತೇಜಕವಾಗಿ ಕೊಡುವಲ್ಲಿ ವಿಳಂಬ ಮಾಡಿದೆ ಎಂದೂ ಅಸಮಧಾನಿಸಿದ್ದಾರೆ.
ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯಾಪ್ತಿಯ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತುತವಾಗಿ ಒಟ್ಟೂ 273 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತಿದ್ದು, ಜಿಲ್ಲೆಯ ಎಲ್ಲಾ ಸಂಘಗಳಿಂದ ಪ್ರತೀ ದಿನಕ್ಕೆ 30,698 ಲೀಟರ್‌ನಷ್ಟು ಹಾಲು ಸಂಗ್ರಹವಾಗುತ್ತಿದೆ. ಇದಕ್ಕೆ ನಿತ್ಯ ಪ್ರತಿ ಲೀಟರ್ ಗೆ 5 ರೂ ಪ್ರೋತ್ಸಾಹ ಧನ ಬರಬೇಕಿತ್ತು ಎಂದು ವಿವರಿಸಿದ್ದಾರೆ.
ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಒಕ್ಕೂಟದ ಉತ್ಪಾದಕರಿಗೆ ನವೆಂಬರ್-2022 ರಿಂದ ಏಪ್ರಿಲ್-2023 ರ ತನಕ 7,48,59,005 ರೂ ರಾಜ್ಯ ಸರ್ಕಾರದಿಂದ ಮಂಜೂರಿಯಾಗಬೇಕಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಹೈನುಗಾರಿಕೆ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲೆಯ ಹೈನುಗಾರರಿಗೆ ಕಳೆದ ಅಕ್ಟೋಬರ್-2022 ದಿಂದ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ಪ್ರೋತ್ಸಾಹಧನ 5 ರೂ ಬಾಕಿ ಇದೆ. ಅಕ್ಟೋಬರ್-2022 ರಿಂದ ಏಪ್ರಿಲ್-2023 ರ ತನಕ ಜಿಲ್ಲೆಯ ಹಾಲು ಉತ್ಪಾದಕರಿಗೆ ಅಂದಾಜು ಒಟ್ಟೂ 3,65,90,425 ರೂ ಬರಬೆಕಿದೆ. ಈ ಹಣ ರಾಜ್ಯ ಸರ್ಕಾರದಿಂದ ಮಂಜೂರಿಯಾಗಬೇಕಿದೆ. ಸರಕಾರದ ವಿಳಂಬ ಧೋರಣೆ ನಿತ್ಯವೂ ಪ್ರತಿ ಲೀಟರ್ ಹಾಲು ಹಿಂಡಲು ದುಬಾರಿ ಖರ್ಚು ಮಾಡುವ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಎಂದಿದ್ದಾರೆ.
ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತ್ಯೇಕ ಒಕ್ಕೂಟ ಮಾಡಲು ಬೇಕಾದ ಎಲ್ಲಾ ತಯಾರಿಗಳನ್ನು ಸಂಪೂರ್ಣವಾಗಿ ಮಾಡಿಕೊಳ್ಳಲಾಗಿತ್ತು. ಇನ್ನೆನು ಒಕ್ಕೂಟ ಆಗೇ ಬಿಡುತ್ತದೆ, ಜಿಲ್ಲೆಯ ಹೈನುಗಾರರ ಹಲವು ವರ್ಷದ ಕನಸು ನನಸಾಗುತ್ತದೆ ಎನ್ನುವ ವಾತಾವರಣವಿರುವಾಗ ಚರ್ಮಗಂಟು ಮಹಾಮಾರಿ ರೋಗ ಜಿಲ್ಲೆಗೆ ಹರಡಿ ಜಿಲ್ಲೆಯಾದ್ಯಂತ ಹೈನಾಗಾರಿಕೆಗೆ ಮಾರಕವಾಗಿ ಪರಿಣಮಿಸಿತು. ಈ ಕಾರಣ ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಕುಂಠಿತವಾಯಿತು. ಸದ್ಯ ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಬಂದಿದ್ದು ಹಾಲು ಶೇಖರಣೆಯಲ್ಲಿ ನಿಧಾನಗತಿಯಲ್ಲಿ ಪ್ರಗತಿ ಕಾಣುತ್ತಿದೆ ಎಂದೂ ಸಮಸ್ಯೆ ವಿವರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ನಡೆಸಿಕೊಂಡು ಹೋಗುವುದು ಬಹಳ ಕಷ್ಟಕರವಾಗಿದೆ. ಭತ್ತದ ಬೆಳೆಗಾರರು ಕಡಿಮೆ ಆದ ಕಾರಣ ಒಣ ಮೇವಿನ ಕೊರತೆಯಿಂದಾಗಿ ಒಣ ಮೇವಿನ ಬೆಲೆಯಲ್ಲಿ ತೀರಾ ಹೆಚ್ಚಳವಾಗಿದ್ದು ಹೈನುಗಾರರು ತೀರಾ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ಪ್ರೋತ್ಸಾಹಧನ ಶೀಘ್ರದಲ್ಲಿ ಬಿಡುಗಡೆಯಾಗದಿದ್ದರೆ ಹಾಲು ಉತ್ಪಾದಕರು ಇನ್ನೂ ಹೆಚ್ಚಿನ ತೊಂದರೆಗೆ ಒಳಗಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.