Slide
Slide
Slide
previous arrow
next arrow

ಜೂ.13,14ಕ್ಕೆ ಅಶ್ವತ್ಥ ವೃಕ್ಷಕ್ಕೆ ಉಪನಯನ ಕಾರ್ಯಕ್ರಮ

300x250 AD

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ, ಮಠದೇವಳ ಗ್ರಾಮ, ಹಳೆಯೂರು ಮಜರೆಯಲ್ಲಿ ಐತಿಹಾಸಿಕ, ಅಪರೂಪದ ಶಿಲ್ಪಕಲಾ ಕೆತ್ತನೆಗಳಿಂದ ದೇಗುಲ ಶ್ರೀ ಶಂಕರ ನಾರಾಯಣ ಕಂಗೊಳಿಸುತ್ತಿದೆ.

1530ರ ನಂತರ ಸೋದೆ ಅರಸರ ಆಳ್ವಿಕೆಯಲ್ಲಿ ಶೈವ-ವೈಷ್ಣವ ಮತಗಳ ಸಾಮರಸ್ಯದ ದ್ಯೋತಕವಾಗಿ ಕರಿ ಕಲ್ಲಿನಿಂದ ನಿರ್ಮಿಸಿದ ಬೃಹತ್ ಕಟ್ಟಡವೇ ಈ ದೇಗುಲ. ಇಲ್ಲಿಯ ವಿಶೇಷ ಎಂದರೆ ಮೊದಲು ಶ್ರೀ ಶಂಕರ ದೇವರ ಮಂದಿರ ನಿರ್ಮಿಸಿ, 150 ವರ್ಷಗಳ ನಂತರ ಶ್ರೀ ನಾರಾಯಣ ದೇವಳ ಕಟ್ಟಲ್ಪಟ್ಟು ಶ್ರೀ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿಯೇ ಎಲ್ಲೂ ಕಂಡುಬಾರದಂತಹ ಅತ್ಯಂತ ವಿಶೇಷ ದೈವ ಸಾನಿಧ್ಯ ಇಲ್ಲಿದೆ. ಎಲ್ಲ ಕಡೆ ಶ್ರೀ ಶಂಕರ – ನಾರಾಯಣರ ಮೂರ್ತಿ ಒಂದೇ ಕಲ್ಲಿನಲ್ಲಿ ಕೆತ್ತಿದ್ದರೆ, ಇಲ್ಲಿ ಮಾತ್ರ ಸಭಾ ಮಂಟಪ, ಅಂತರಾಳ ಒಂದೇ ಆಗಿದೆ. ಆದರೆ ಗರ್ಭಗುಡಿಗಳು ಮಾತ್ರ ಬೇರೆ-ಬೇರೆಯಾಗಿವೆ. ಒಂದೆಡೆ ಶ್ರೀ ಶಂಕರ ದೇವರು ಹಾಗೂ ಇನ್ನೊಂದೆಡೆ ಶ್ರೀ ನಾರಾಯಣ ದೇವರುಗಳ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿದೆ. ದೇವಳದ ಮೂಡಣ ದಿಕ್ಕಿನಲ್ಲಿ 2 ಪ್ರಧಾನ ಬಾಗಿಲುಗಳಿದ್ದು ತೆಂಕಣ ಭಾಗದಲ್ಲಿ ಶ್ರೀ ಶಂಕರ ಮತ್ತು ಬಡಗಣ ಭಾಗದಲ್ಲಿ ಶ್ರೀ ನಾರಾಯಣ ದೇವರು ನೆಲೆಸಿ ಭಕ್ತರನ್ನು ಹರಸುತ್ತಿದ್ದಾರೆ.

ರಾಜರ ಆಳ್ವಿಕೆಯಲ್ಲಿ ಪ್ರಜೆಗಳ ನೆಮ್ಮದಿ-ಶಾಂತಿಗೋಸ್ಕರ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಲೆ ಮತ್ತು ಸಾಂಸ್ಕೃತಿಕ ನೆಲೆಗಟ್ಟಾಗಿ ಈ ದೇವಳ ಮುಂಚೂಣಿಯಲ್ಲಿತ್ತು. ಅರಸರ ಆಳ್ವಿಕೆ ಕೊನೆಗೊಂಡ ನಂತರ, ಸರಿಯಾದ ನಿರ್ವಹಣೆ ಇಲ್ಲದೇ, ದೇವಳ ದುಃಸ್ಥಿತಿ ಹೊಂದಿ, ಜನಮಾನಸದಿಂದ ದೂರವಾಯಿತು. 2003 ರಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ – ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಂಕಲ್ಪದಂತೆ, ಸೋಂದಾ ಜಾಗೃತ ವೇದಿಕೆಯ ಮುಖಾಂತರ, ಸುಧಾಪುರ ಕ್ಷೇತ್ರದ ಮೂರು ಮಠಗಳು ಸೇರಿ, ಕರ್ನಾಟಕ ಸರಕಾರದೊಂದಿಗೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ ಕೈ ಜೋಡಿಸಿ, ಕೆಲಸಭಾರವನ್ನು ನಿರ್ವಹಿಸಿದ್ದರಿಂದ ಈ ದೇಗುಲ ಮೊದಲಿನಂತೆ ಕಂಗೊಳಿಸಿತು. 2004 ರಲ್ಲಿ ಶ್ರೀ ದೇವರುಗಳ ಮೂಲ ಪ್ರತಿಮೆಗಳ ಪುನರ್ ಪ್ರತಿಷ್ಠಾಪನೆಯನ್ನು ಎಲ್ಲ ಮಠ-ಮಂದಿರಗಳ-ಸಂಘ ಸಂಸ್ಥೆಗಳ-ಊರ ನಾಗರಿಕರ, ಭಕ್ತಾದಿಗಳ ನೆರವಿನಿಂದ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು. ಅಂದಿನಿಂದ ನಿತ್ಯ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.
ಶ್ರೀ ದೇವಳದಲ್ಲಿ ಅಶ್ವತ್ಥನಾರಾಯಣ ಕೃಪೆ ಇರಬೇಕು ಎಂದು, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮನಗಂಡು, ದೇವಳದ ಈಶಾನ್ಯ ಭಾಗದಲ್ಲಿ ಅಶ್ವತ್ಥ ಸಸ್ಯವೊಂದನ್ನು ಆರೋಪಣ ಮಾಡಿದ್ದರು. ಪರಮ ಪೂಜ್ಯರ ಸಂಕಲ್ಪದಂತೆ ಊರ ನಾಗರಿಕರು, ಮಾತೆಯರು ವೃಕ್ಷ ಸಂರಕ್ಷಣೆ ಮಾಡಿಕೊಂಡು ಬಂದಿರುತ್ತಾರೆ. ಅಶ್ವತ್ಥ ವೃಕ್ಷಕ್ಕೆ ಸಾವಿರಾರು ಎಲೆಗಳು ಆಗಿರುವುದರಿಂದ ಆ ವೃಕ್ಷಕ್ಕೆ ಉಪನಯನಾದಿ ಸಂಸ್ಕಾರಗಳನ್ನು ನೀಡಬೇಕು ಎಂದು ಪರಮ ಪೂಜ್ಯ ಶ್ರೀಗಳು ಆದೇಶ ನೀಡಿದ್ದಾರೆ.

300x250 AD

ಇದು ಸುಧಾಪುರ ಇತಿಹಾಸದಲ್ಲೆ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ಕಾರ್ಯ. ಯತಿಗಳೊಬ್ಬರು ಅಶ್ವತ್ಥ ಸಸ್ಯರೋಪಣ ಮಾಡಿ ಅದಕ್ಕೆ ಬ್ರಹ್ಮೋಪದೇಶ ಮಾಡಿಸುತ್ತಿರುವುದು ಇದೇ ಮೊದಲಾಗಿದೆ. ಗ್ರಾಮಗಳಲ್ಲಿನ ಎಲ್ಲ ನಾಗರಿಕರು ಬಂಧು ಭಗಿನಿಯರು ಮತ್ತು ಶ್ರೀ ಶಂಕರ-ನಾರಾಯಣ ದೇವರನ್ನು ತಮ್ಮ ಕುಲದೇವರಾಗಿ ಸ್ವೀಕರಿಸಿದ ಭಕ್ತರೂ ಸೇರಿ ಶ್ರೀ ಶಂಕರ-ನಾರಾಯಣ ದೇವರುಗಳ ಸಾನ್ನಿಧ್ಯದಲ್ಲಿರುವ, ಈ ಅಶ್ವತ್ಥ ವೃಕ್ಷಕ್ಕೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ, ಉಪನಯನಾದಿ, ಸಂಸ್ಕಾರಗಳನ್ನು ಪರಮ ಪೂಜ್ಯ ಶ್ರೀಗಳವರ ಮಾರ್ಗದರ್ಶನದಲ್ಲಿ ಜೂನ್ 13 ಹಾಗೂ 14 ರಂದು ನೆರವೇರಿಸಲಾಗುವುದು. ಈ ಎರಡು ದಿನಗಳು ನಡೆಯುವ ಈ ಸುಂದರ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಹಾಗೂ ಸಾಕ್ಷೀಕರಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top