ಜೊಯಿಡಾ: ತಾಲೂಕಿನ ರಾಮನಗರ ಗೋವಾ ರಸ್ತೆಯ ದುಃಸ್ಥಿತಿಯನ್ನು ತಹಶೀಲ್ದಾರ್ ಜುಬಿನ್ ಮಹಾಪಾತ್ರ ಪರಿಶೀಲಿಸಿ ಅಗತ್ಯಕ್ರಮ ಕೈಗೊಂಡು ಆದೇಶ ಹೊರಡಿಸಿದ್ದಾರೆ.
ರಾಮನಗರದಿಂದ ಗೋವಾ ಹೋಗುವುದು ಮತ್ತು ಗೋವಾದಿಂದ ಬರುವ ವಾಹನಗಳು ಕ್ಯಾಸಲ್ ರಾಕ್ ಜಗಲಬೇಟ್ ಮೂಲಕ ಬಂದು ರಾಮನಗರ, ದಾಂಡೇಲಿ, ಬೆಳಗಾವಿ, ಹುಬ್ಬಳ್ಳಿಗಳಿಗೆ ಹೋಗುವಂತೆ ಓನ್ ವೇ ಮಾರ್ಗಸೂಚಿ ರಚಿಸಿ, ರಾಮನಗರ, ಅನಮೋಡ್ ನಡುವೆ ಕೆಟ್ಟು ಹೋದ ರಸ್ತೆಯಲ್ಲಿ ಅಪಘಾತಗಳು ಆಗದಿರಲಿ ಎಂದು ಈ ಕ್ರಮ ಕೈಗೊಂಡಿದ್ದಾರೆ.
ವಾಹನಗಳು ರಾಮನಗರಕ್ಕೆ ಬಂದು ನೇರವಾಗಿ ಗೋವಾ ಹೋಗಬಹುದು. ಗೋವಾದಿಂದ ಬರುವ ವಾಹನಗಳು ಅನಮೋಡದಿಂದ ಕ್ಯಾಸಲ್‌ರಾಕ್ ಮಾರ್ಗವಾಗಿ ಜಗಲಬೇಟಕ್ಕೆ ಬಂದು ಅಲ್ಲಿಂದ ರಾಮನಗರ, ಬೆಳಗಾವಿ, ಹುಬ್ಬಳ್ಳಿಗಳಿಗೆ ಹೋಗುವಂತೆ ಮಾರ್ಗದ ಬದಲಾವಣೆ ಮಾಡಿ ಆದೇಶ ನೀಡಿದ್ದಾರೆ. ಸ್ವಲ್ಪ ಸುತ್ತಿನ ದಾರಿ ಆದರೂ ಸುರಕ್ಷತೆ ದೃಷ್ಟಿಯಿಂದ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಚೌಹಾಣ್, ಆರಕ್ಷಕ ಇಲಾಖೆಯವರು ಮತ್ತು ಕಂದಾಯ ಇಲಾಖೆಯವರು ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.