ಸಿದ್ದಾಪುರ: ಭಕ್ತಿಭಾವದಿಂದ ಮಾಡಿದ ಕಾರ್ಯಗಳಿಗೆ ನಿಶ್ಚಿತ ಫಲ ದೊರೆಯುತ್ತದೆ. ಅದರ ಪರಿಣಾಮ ಶಾಶ್ವತವಾಗಿ ಅನಂತಕಾಲ ಇರುತ್ತದೆ ಎಂದು ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಅವರು ತಾಲೂಕಿನ ವಡಗೆರೆಯ ‘ಅನ್ನಗಿರಿ’ಯಲ್ಲಿ ಶ್ರೀಗುರುಪಾದುಕಾ ಪೂಜೆ, ಭಿಕ್ಷಾ ಸೇವೆ ಸ್ವೀಕರಿಸಿ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ಪರಿವಾರಸಹಿತ ಶ್ರೀ ರಾಮದೇವರು ಹಾಗೂ ಗುರುಪರಂಪರೆಯನ್ನು ಬರಮಾಡಿಕೊಂಡು ಶ್ರದ್ಧಾ ಭಕ್ತಿಯಿಂದ ಸೇವೆ ಸಲ್ಲಿಸಿದ್ದು ಈ ಮನೆಗೆ ಆರದ ಬೆಳಕಿನ ಪ್ರವೇಶವಾದಂತಾಗಿದೆ ಎಂದ ಶ್ರೀಗಳು ಮನುಷ್ಯನಾದವನಿಗೆ ಭೂಮಿಗೆ ಬಂದಮೇಲೆ ಒಂದಲ್ಲಾ ಒಂದು ತೊಂದರೆ ತೊಡಕು ಇದ್ದೇ ಇರುತ್ತದೆ. ಇಂತಹ ಅಶುಭಗಳು ಹತವಾಗಲಿ, ಶುಭ ಆವರಿಸಲಿ, ಅಮೃತಫಲ ಲಭಿಸಲಿ, ಸಕಲರಿಗೂ ಒಳಿತಾಗಲೆಂದು ಹರಸಿದರು.
ಅನ್ನಗಿರಿ ಕುಟುಂಬದ ಪರವಾಗಿ ಪ್ರಾರ್ಥನೆ ಮಾಡಿಕೊಂಡ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರದ ರಾಜಗೋಪಾಲಕೃಷ್ಣ ಜೋಶಿ ಅವರು ಶ್ರೀ ರಾಘವೇಶ್ವರಭಾರತೀ ಶ್ರೀಗಳು ಶಿಷ್ಯರ ಶ್ರೇಯೋಭಿವೃದ್ಧಿಗಾಗಿ ರಾಮಾಯಣ ಮಹಾಸತ್ರ, ವಿಶ್ವಗೋಸಮ್ಮೇಳನ, ಗೋಸ್ವರ್ಗ ನಿರ್ಮಾಣ, ವಿಷ್ಣುಗುಪ್ತ ವಿಶ್ವವಿದ್ಯಾಲಯದಂತಹ ಮಹತ್ಕಾರ್ಯವನ್ನು ಮಾಡಿದ್ದಾರೆ. ಅವರ ಸಮರ್ಪಣಾಭಾವ, ಕಾರುಣ್ಯಭರಿತ ಮಾತೃವಾತ್ಸಲ್ಯದಿಂದಾಗಿ ಶಿಷ್ಯಕೋಟಿ ಪುನೀತವಾಗುತ್ತಿದೆ ಎಂದರು.
ರಾಜೇಶ ರಾಜಾರಾಮ ಹೆಗಡೆ ದಂಪತಿಗಳು ಶ್ರೀಗುರುಪಾದುಕಾಪೂಜೆ, ಭಿಕ್ಷಾ ಸೇವೆ ನಡೆಸಿಕೊಟ್ಟರು. ವಿ.ಎಂ.ಹೆಗಡೆ ಆಲ್ಮನೆ ಶಿರಸಿ ಇತರರು ಶ್ರೀಗುರುಪಾದುಕಾ ಪೂಜೆ ಸಲ್ಲಿಸಿದರು. ಹರಿಪ್ರಸಾದ ಪೆರಿಯಾಪು, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಚಟ್ನಳ್ಳಿ, ಗುರಿಕ್ಕಾರರಾದ ಅಶೋಕ ಹೆಗಡೆ ಕೊಳಗಿ, ಶ್ರೀಕಾಂತ ಭಟ್ಟ ಕೊಳಗಿ, ಎಂ.ವಿ.ಹೆಗಡೆ ವಡ್ಡಿನಗದ್ದೆ, ಮಂಜುನಾಥ ಹೆಗಡೆ ಭತ್ತಗೆರೆ ಸೇರಿದಂತೆ ಅನೇಕ ಗಣ್ಯರು, ಶಿಷ್ಯ ಭಕ್ತರು ಪಾಲ್ಗೊಂಡಿದ್ದರು. ರಾಘವೇಶ್ವರ ಭಾರತೀ ಶ್ರೀಗಳು ಎಲ್ಲರಿಗೂ ಫಲಮಂತ್ರಾಕ್ಷತೆ ಅನುಗ್ರಹಿಸಿ, ಆಶೀರ್ವದಿಸಿದರು.