ಶಿರಸಿ: ಮನುಷ್ಯನ ಅಂತರಂಗದಲ್ಲಿ ಸದಾ ಭಗವಂತನ ಆರಾಧನೆ ಇದ್ದರೆ ಪೂರ್ಣಾಯುಷ್ಯ ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.
ಅವರು ತಾಲೂಕಿನ ಎಕ್ಕಂಬಿ ಸಾಲೇಕೊಪ್ಪದ ಪಟೇಲರಮನೆಯ ಶತಾಯುಷಿ ವೆಂಕಟರಮಣ ಹೆಗಡೆ ಅವರನ್ನು ಸಮ್ಮಾನಿಸಿ ಆಶೀರ್ವದಿಸಿ, ಆಶೀರ್ವಚನ ನೀಡಿದರು.
ಅಂತರಂಗದಲ್ಲಿ ಭಗವಂತನ ಸ್ಮರಣೆ ಇರಬೇಕು. ಆಗ ಮಾತ್ರ ಭಗವಂತ ಕೊಟ್ಟ ಆಯುಷ್ಯ ಪೂರ್ಣ ಅನುಭವಿಸಲು ಸಾಧ್ಯ. ದೇವರ ಸ್ಮರಣೆ ಇದ್ದರೆ ಮನಸ್ಸೂ ಪ್ರಸನ್ನವಾಗಿರುತ್ತದೆ ಎಂದು ಶ್ರೀಗಳು ಹೇಳಿದರು.
ವ್ಯಕ್ತಿಯಲ್ಲಿ ರಾಗ, ದ್ವೇಷ, ಅಹಂಕಾರ ಇರಬಾರದು. ಆಗಲೂ ಪೂರ್ಣ ಆಯುಷ್ಯ ಸಿಗಲು ಸಾಧ್ಯವಿದೆ. ಜೊತೆಗೆ ವ್ಯಕ್ತಿಯ ಪರಿವಾರ ಕೂಡ ಚೆನ್ನಾಗಿ ಇರಬೇಕು.ವೆಂಕಟರಮಣ ಹೆಗಡೆ ಅವರಿಗೆ ಒಳ್ಳೆಯ ಪರಿವಾರ, ಭಗವಂತನ ಆರಾಧನೆಯಿಂದ, ಒಳ್ಳೆಯ ಮನಸ್ಸಿನ ಕಾರಣದಿಂದ ಪೂರ್ಣಾಯುಷ್ಯ ಸಾಧ್ಯವಾಗಿದೆ ಎಂದರು.
ಈ ವೇಳೆ ಮಂಜುನಾಥ ಹೆಗಡೆ, ಗಣಪತಿ ಹೆಗಡೆ ಇತರರು ಇದ್ದರು. ಇದಕ್ಕೂ ಮುನ್ನ ಶ್ರೀಗಳ ಪಾದಪೂಜೆ ನಡೆಸಲಾಯಿತು.