ಕಾರವಾರ: ಮಹಿಳೆಯನ್ನ ಸೋಲಿಸಲು ಕುತಂತ್ರ ಮಾಡಿದವರು ಹೇಡಿಗಳು. ಮುಂದಿನ ದಿನ ಕಾಯಿರಿ, ಅವರಿಗಿದೆ ಮಾರಿ ಹಬ್ಬ. ನಾನು ಮುಂದೆ ಹೋಗಿ ಒಂದು ಹೆಜ್ಜೆ ಹಿಂದೆ ಬಂದಿದ್ದೇನೆ ಎಂದರೆ ಅದರ ಹಿಂದೆ ಅರ್ಥವಿರುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಾಮರ್ಥ್ಯ ತೋರಿಸಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ದೇವಳಿವಾಡದ ತಮ್ಮ ಮನೆಯ ಬಳಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ರೂಪಾಲಿ ನಾಯ್ಕ ಯಾವತ್ತೂ ಕಾರ್ಯಕರ್ತರ ಜೊತೆ ಇದ್ದಾಳೆ. ಬಿಜೆಪಿ ಕಾರ್ಯಕರ್ತರ ಋಣ ತೀರಿಸಲು ಸಾಧ್ಯವಿಲ್ಲ. ಯಾವತ್ತೂ ಅಧಿಕಾರಕ್ಕಾಗಿ, ಕುರ್ಚಿಯಲ್ಲಿರಲು ಯಾವತ್ತೂ ಆಸೆಪಟ್ಟವಳಲ್ಲ. ಅಧಿಕಾರ ಶಾಶ್ವತವೆಂದು ಹೋರಾಡಿದವಳೂ ಅಲ್ಲ. ಕಾರ್ಯಕರ್ತರ ನೋವು ನನಗೆ ಸಹಿಸಲಾಗಿಲ್ಲ. ಕರೆಯದಿದ್ದರೂ ಇಷ್ಟೊಂದು ಜನ ಸೇರಿರುವುದು ನೀವು ನನ್ನ ಮೇಲಿಟ್ಟ ಪ್ರೀತಿಗೆ ಸಾಕ್ಷಿ. ಇದರಿಂದಲೇ ನಾನಿನ್ನೂ ಇಲ್ಲಿ ಗಟ್ಟಿಯಾಗಿ ನಿಂತಿದ್ದೇನೆ ಎಂದರು.
ಮತದಾರರೇ ದೇವರು. ಕಾರವಾರ- ಅಂಕೋಲಾ ಕ್ಷೇತ್ರದ ಜನತೆ ನನಗೆ ಎಲ್ಲಿಯೂ ಕಡಿಮೆ ಮಾಡಿಲ್ಲ. ಕೇವಲ 2100 ಮತಗಳಷ್ಟೇ ಕಡಿಮೆ ಆಗಿರುವುದು. ಇದು ಸೋಲಲ್ಲ. ಜನತೆ ನನ್ನನ್ನ ಗೆಲ್ಲಿಸಿದ್ದಾರೆ. 75 ಸಾವಿರ ಮತ ಕೊಟ್ಟ ಜನರಿಗೆ ನಾನು ಚಿರ ಋಣಿ. ಇನ್ನೂ ರೂಪಾಲಿ ನಾಯ್ಕ ಇಲ್ಲೇ ಗಟ್ಟಿಯಾಗಿ ನಿಂತು ಜನರೊಂದಿಗೆ ಸಾಮಾಜಿಕ ಕಾರ್ಯಗಳನ್ನ ಮಾಡುತ್ತಾಳೆ. ಅಧಿಕಾರ ಶಾಶ್ವತವಲ್ಲ. ಸೋಲು- ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಧಿಕಾರವಿದ್ದೇ ಕೆಲಸ ಮಾಡಬೇಕಂತಿಲ್ಲ. ಹೌದು, ಶಾಸಕರಾಗಿದ್ದರೆ, ಸರ್ಕಾರವಿದ್ದರೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ, ನಾನು ಶಾಸಕಳಾಗುವ ಮುನ್ನ ಸಾಕಷ್ಟು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ ಎಂದರು.
ರೂಪಾಲಿ ನಾಯ್ಕ ಸಾಮಾನ್ಯಳಲ್ಲ. ಯಾರು ಯಾರನ್ನ ಸೋಲಿಸಿದ್ದಾರೆಂಬುದು ಜನಕ್ಕೆ ಗೊತ್ತಿದೆ. ಒಂದು ಮಹಿಳೆಯನ್ನ ಸೋಲಿಸಲು ಎಲ್ಲಾ ನಾಯಕರು ಒಂದಾಗಿದ್ದರು, ನಾಚಿಕೆ ಆಗಬೇಕು ಅವರಿಗೆ. ನಮಗೆ ಸೋಲಾಗಿಲ್ಲ, ಅವರಿಗಾಗಿದ್ದು ಸೋಲು. 25 ನಾಯಕರುಗಳೆಂದುಕೊoಡರೂ 2100 ಸೋತ ಮಗಳನ್ನ ವಿಭಜಿಸಿದರೆ ಒಬ್ಬ ನಾಯಕನ ಅರ್ಹತೆ ಕೇವಲ 25 ಮತಗಳು. ಅವರು 40- 50 ಸಾವಿರ ಮತಗಳಿಂದ ಗೆದ್ದಿದ್ದಾರೆಂಬ0ತೆ ಖುಷಿ ಪಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮನೆಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಿಸುವವರಿಗೆ ನಾಚಿಕಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ, ಅಷ್ಟರಲ್ಲೇ ಐಬಿಯಲ್ಲಿ 5% ಕಮಿಷನ್ ಬಗ್ಗೆ ಮಾತುಕತೆ ಮಾಡುತ್ತಿದ್ದಾರಂತೆ. ನನಗೆಷ್ಟು ಟಾರ್ಚರ್ ಮಾಡಿದರು. ನನ್ನ ಕುಟುಂಬದ ಬಗ್ಗೆ ಅಪಪ್ರಚಾರ ಮಾಡಿದರು. ಸುಳ್ಳನ್ನೇ ಸತ್ಯ ಮಾಡಲು ಹೊರಟರು. ಆದರೆ ದೇವರ ಸಾಕ್ಷಿಯಾಗಿ ಹೇಳುತ್ತೇನೆ, ಅವರಿಗೆ ಮುಂದೆ ಮಾರಿ ಹಬ್ಬ ಕಾದಿದೆ. ಹಿಂದೆ ಅಧಿಕಾರದಲ್ಲಿ ಹೇಗಿದ್ದೆನೋ ಹಾಗೆ ಮುಂದೆಯೂ ನಿಮ್ಮ ಜೊತೆ ಇರುತ್ತೇನೆ. ಕಾರ್ಯಕರ್ತರು ಹೆದರಬೇಡಿ, ನಾನಿದ್ದೇನೆ. ನಾವು ಹುಲಿಗಳು, ಇಲಿಗಳಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ಈ ದೇಹ, ಅಧಿಕಾರ ಯಾವತ್ತೂ ಶಾಶ್ವತವಲ್ಲ. ಕೊಟ್ಟ ಮಾತುಗಳನ್ನ ಉಳಿಸಿಕೊಳ್ಳಬೇಕು ಎಂದು ಕರೆನೀಡಿದರು.