ಕಾರವಾರ: ನಾಡವರ ಸಮಾಜದ ಮತಗಳು ತಮಗೆ ಬೇಡ ಎಂದು ರೂಪಾಲಿ ಎಸ್.ನಾಯ್ಕ ಅವರು ಹೇಳಿದ್ದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹರಿದುಬಿಡುತ್ತಿದ್ದಾರೆ. ಹಾಗಿದ್ದರೆ ರೂಪಾಲಿ ಎಸ್.ನಾಯ್ಕ ಅವರು ಆ ರೀತಿ ಹೇಳಿದ್ದರ ವಿಡಿಯೋ ಆಗಲಿ, ಆಡಿಯೋ ಆಗಲಿ ಪ್ರದರ್ಶಿಸಲಿ. ಅವರ ಮತಗಳನ್ನು ಕಸಿಯಲು ಇಂತಹ ಇಲ್ಲಸಲ್ಲದ, ಎಲ್ಲೂ ಹೇಳಿರದ ಮಾತುಗಳನ್ನು ಸತ್ಯ ಸುದ್ದಿ ಎಂಬoತೆ ಬಿಂಬಿಸಲಾಗುತ್ತಿದೆ. ಈ ಸುಳ್ಳು ಸುದ್ದಿ ಹಬ್ಬಿಸಿದವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಎದುರು ಪ್ರಮಾಣ ಮಾಡಲಿ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ, ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ ಹಾಗೂ ಅಂಕೋಲಾ ಮಂಡಲದ ಅಧ್ಯಕ್ಷ ಸಂಜಯ ನಾಯ್ಕ ತಿಳಿಸಿದ್ದಾರೆ.
ರೂಪಾಲಿ ಎಸ್.ನಾಯ್ಕ ಅವರಿಗೆ ಎಲ್ಲ ಸಮಾಜದ ಬಗ್ಗೆ ಗೌರವ ಇದೆ. ಯಾವುದೇ ಸಮಾಜಕ್ಕೆ ಕಿಂಚಿತ್ತೂ ಧಕ್ಕೆ ಆಗದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗೆಲುವು, ಸೋಲು ಬೇರೆ ಮಾತು. ಆದರೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳೆಯುವಂತಹ, ಒಂದು ಸಮಾಜದ ವಿರೋಧಿ ಎಂದು ಬಿಂಬಿಸುವ ಕಿಡಿಗೇಡಿಗಳು ಇದನ್ನು ಅರ್ಥಮಾಡಿಕೊಂಡು ಈ ಸವಾಲನ್ನು ಸ್ವೀಕರಿಸಬೇಕು. ನಾಡವ ಸಮಾಜದ ಮುಖಂಡರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೊಗ್ರೆ ದೇವಾಲಯಕ್ಕೆ ಸರ್ಕಾರದಿಂದ 50 ಲಕ್ಷ ರೂ.ಗಳನ್ನು ರೂಪಾಲಿ ನಾಯ್ಕ ಅವರು ಮಂಜೂರಿ ಮಾಡಿಸಿರುವುದೂ ಗಮನಾರ್ಹವಾಗಿದೆ ಎಂದಿದ್ದಾರೆ.
ಇನ್ನು ರೂಪಾಲಿ ಎಸ್.ನಾಯ್ಕ ಅವರು ಕಾರವಾರ ಜನತೆಯ ಮತಗಳು ತಮಗೆ ಬೇಡ ಎಂದು ಹೇಳಿದ್ದಾರೆ ಎಂಬ ವದಂತಿಯನ್ನೂ ಕೆಲ ಕಿಡಿಗೇಡಿಗಳು ಹಬ್ಬಿಸಿದ್ದಾರೆ. ನೇರವಾಗಿ ಚುನಾವಣೆಯಲ್ಲಿ ಎದುರಿಸಲಾರದ ಕೆಲವರು ಇಂತಹ ವಿಕೃತ ಕುತಂತ್ರ ನಡೆಸಿದ್ದು, ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದೂ ಹೇಳಬೇಕಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ವಿಕೃತ ಮನಸ್ಸಿನವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.