ಗೋಕರ್ಣ: ಕಡಲತೀರ ಮತ್ತು ನದಿತೀರದಲ್ಲಿ ಈಗ ಹೆಚ್ಚಿನ ಪ್ರಮಾಣದಲ್ಲಿ ‘ಚಿಪ್ಪು ಕಲಗಾ’ ದೊರೆಯುತ್ತಿದ್ದು, ಕೆಲವರು ಚಿಪ್ಪುಗಳಿಂದ ಕಲಗಾ ಮಾಂಸವನ್ನು ಬೇರ್ಪಡಿಸಿ ಮಾರಾಟ ಮಾಡುವುದನ್ನೇ ಉಪಕಸುಬನ್ನಾಗಿಸಿಕೊಂಡಿದ್ದಾರೆ. ಹಾಗೇ ಈ ಮಾಂಸಗಳು ರುಚಿಕಟ್ಟಾಗಿರುವುದರಿಂದ ಭಾರೀ ಬೇಡಿಕೆಯಿದೆ.
ಅತೀ ರುಚಿಯಾದ ಕಡಲ ಜೀವಿಗಳಲ್ಲಿ ಒಂದಾದ ಕಲಗಾ ಮಾಂಸವು ಕ್ಯಾಲ್ಸಿಯಂ ಅಂಶದಿAದ ಕೂಡಿದ್ದು, ವಿಶಿಷ್ಠವಾದ ಆಹಾರವಾಗಿದೆ. ಕೆಲವರು ನದಿ ತೀರದಲ್ಲಿಯೇ ಕತ್ತಿಯನ್ನು ಬಳಸಿ ಚಿಪ್ಪಿನಿಂದ ಮಾಂಸವನ್ನು ತೆಗೆದರೆ ಇನ್ನು ಕೆಲವರು ಕಲ್ಲು ಸಮೇತ ಚಿಪ್ಪುಗಳನ್ನು ಮನೆಗೆ ತಂದು ನಂತರ ತಮಗೆ ಬಿಡುವಾದಾಗ ಮಾಂಸವನ್ನು ತೆಗೆಯುತ್ತಾರೆ.
ಹೊರ ರಾಜ್ಯಗಳಲ್ಲಿ ಇದರ ಬೆಲೆ ಕೆ.ಜಿ.ಗೆ 350 ರೂಪಾಯಿ ಮೌಲ್ಯಕ್ಕು ಮಿಗಿಲಾಗಿದೆ. ಆದರೆ ಇದು ಈ ಭಾಗದಲ್ಲಿ ರಫ್ತು ಮಾಡುವಷ್ಟು ಪ್ರಮಾಣದಲ್ಲಿ ಲಭ್ಯವಾಗದಿದ್ದರಿಂದಾಗಿ ಸ್ಥಳೀಯವಾಗಿ ಮಾರಾಟವನ್ನು ಮಾಡಲಾಗುತ್ತಿದೆ. ಕಲಗಾದ ಮಾಂಸದಿಂದ ಫ್ರೈ, ಸುಕ್ಕಾ, ಸಾರು ಹೀಗೆ ವಿವಿಧ ಪದಾರ್ಥಗಳನ್ನು ತಯಾರಿಸುತ್ತಾರೆ. ಗಂಗಾವಳಿ ಮತ್ತು ಅಘನಾಶಿನಿ ನದಿಯಂಚಿಗೆ ಹೆಚ್ಚಾಗಿ ಕಂಡುಬರುತ್ತದೆ.