ಹಳಿಯಾಳ: ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಒಬ್ಬ ಅತ್ಯುತ್ತಮ ಸಂಘಟನಾಕಾರ. ಅವರು ಮೂರನೇ ಬಾರಿ ಸೋತರು ಸಹಿತ ಕಾರ್ಯಕರ್ತರಾದ ನಾವುಗಳು ಎಂದಿಗೂ ಎದೆಗುಂದಿಲ್ಲ. ಅವರ ನೇತೃತ್ವದಲ್ಲಿಯೇ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗಳನ್ನು ಎದುರಿಸಲಿದ್ದೇವೆ ಎಂದು ಬಿಜೆಪಿ ಪಕ್ಷದ ಗ್ರಾಮೀಣ ಭಾಗದ ಮುಖಂಡರು ಸ್ಪಷ್ಟಪಡಿಸಿದರು.
ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ನಡೆಸಿ ಗ್ರಾಮೀಣ ಭಾಗದ ಮುಖಂಡರಲ್ಲಿ ಹಿರಿಯರಾದ ಹಳಿಯಾಳ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾಜಿ ಪಾಟೀಲ್ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಸುನೀಲ್ ಹೆಗಡೆ ಅವರು ಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾಗಿ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದರು ಬಳಿಕ ಮೂರು ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಆದರೇ ಅವರ ಸೋಲಿನ ಅಂತರ ತೀರಾ ಕಡಿಮೆ ಆಗಿದ್ದು, ಅಂಕಿ ಸಂಖ್ಯೆಯ ಪ್ರಕಾರ ಅವರ ಸೋಲಾಗಿದೆ ವಿನಃ ಜನರ ಮನಸ್ಸಲ್ಲಿ ಅವರ ವಿಜಯಶಾಲಿಯಾಗಿದ್ದಾರೆ ಎಂದರು.
ಹೆಗಡೆ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಜಾತಿ, ಧರ್ಮಕ್ಕೆ ಸೀಮಿತಿರಾಗಿರದೆ ಪಕ್ಷಾತೀತವಾಗಿ ಕೆಲಸ ಮಾಡುವ ಜನನಾಯಕರಾಗಿದ್ದು ಅವರ ನೇತೃತ್ವದಲ್ಲಿ 2024ರ ಲೋಕಸಭಾ ಚುನಾವಣೆ ಎದುರಿಸಲಾಗುವುದು ಅಲ್ಲದೇ ಜಿಲ್ಲಾ ಪಂಚಾಯತ, ತಾಪಂ, ಗ್ರಾಪಂ ಸೇರಿ ಸೋಸೈಟಿಗಳ ಚುನಾವಣೆ ಕೂಡ ಅವರ ನೇತೃತ್ವ, ಮಾರ್ಗದರ್ಶನದಲ್ಲಿಯೇ ನಾವೆಲ್ಲ ಬಿಜೆಪಿ ಪಕ್ಷದ ಕಾರ್ಯಕರ್ತರು ಎದುರಿಸಲಿದ್ದೇವೆಂದು ಹೇಳಿದರು.
ಬಿಕೆ ಹಳ್ಳಿ ಗ್ರಾಪಂ ಉಪಾಧ್ಯಕ್ಷ ಯಲ್ಲಪ್ಪ ಹೇಳವರ ಮಾತನಾಡಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಿರುವ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿಯೇ ಮತ್ತೇ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಕಾರ್ಯ ಪ್ರಾರಂಭಿಸಲಾಗುವುದು ಗ್ರಾಮಾಂತರ ಭಾಗದಲ್ಲಿ ಮತ್ತಷ್ಟು ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು ಮುಂದಿನ ಎಲ್ಲ ಚುನಾವಣೆಗಳಲ್ಲಿ ವಿಜಯ ಪತಾಕೆ ಹಾರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೊಷ್ಠಿಯಲ್ಲಿ ಪ್ರಮುಖರಾದ ಹನುಮಂತ ಚಿನಗಿನಕೊಪ್ಪ, ಮಾರುತಿ ಪೆಡನೆಕರ, ರಾಜು ಸಡೆಕರ, ಮೋಹನ ಗೌಡಾ, ವಿಠ್ಠಲ ಕೊಡ್ಲಿ, ಶಂಕರ ಗಳಗಿ, ವಿಠ್ಠಲ ಸಿದ್ದನ್ನವರ, ಬಾಬುರಾವ ಗೌಡಾ, ಅಶೋಕ ಮೇತ್ರಿ, ಸುಭಾಷ ಪರಸನ್ನವರ, ಸಹದೇವ ಮಿರಾಶಿ ಸೇರಿದಂತೆ ಪ್ರಮುಖರು ಇದ್ದರು.