ಬೆಂಗಳೂರು: ಇಲ್ಲಿನ ನಾರಾಯಣ ನೇತ್ರಾಲಯದ ಅಧ್ಯಕ್ಷ ಹಾಗೂ ಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ (69) ನಿಧನರಾಗಿದ್ದಾರೆ.
ಎಂದಿನಂತೆ ಬೆಳಗ್ಗೆ ಆಸ್ಪತ್ರೆಗೆ ಬಂದು ನಂತರ ಜಿಮ್‌ಗೆ ತೆರಳಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದರು.ಭುಜಂಗ ಶೆಟ್ಟಿ ಅವರಿಗೆ ಹೃದಯಾಘಾತವಾಗಿದ್ದು, ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ನಂತರ ಅವರು ಮನೆಗೆ ತೆರಳಿದ್ದು, ಮತ್ತೆ ಹೃದಯಾಘಾತವಾಗಿದೆ.
ರಾಜಾಜಿನಗರದ ನಾರಾಯಣ ನೇತ್ರಾಲಯದ ಬಳಿ ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರಿಂದ ಚಿಕಿತ್ಸೆ ಪಡೆದವರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆಯಬಹುದಾಗಿದೆ.
ಭುಜಂಗ ಶೆಟ್ಟಿ ಅವರ ನಿಧನ ಅಪಾರ ನೋವುಂಟು ಮಾಡಿದೆ. ಲಕ್ಷಗಟ್ಟಲೆ ಜನರಿಗೆ ದೃಷ್ಟಿ ನೀಡಿ ಬೆಳಕಾಗಿದ್ದರು ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಭುಜಂಗ ಶೆಟ್ಟಿ ಅವರ ಕೊಡುಗೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರು. ಆಧುನಿಕ ತಂತ್ರಜ್ಞಾನದ ಮೂಲಕ ಸಾರ್ವಜನಿಕ ಸೇವೆ ನೀಡುತ್ತಿದ್ದ ಶೆಟ್ಟಿ ಅವರ ನಿಧನ ವಾರ್ತೆ ಮನಸ್ಸಿಗೆ ಬೇಸರ ತಂದಿದೆ,ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲು ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.