ಸಿದ್ದಾಪುರ: ಸರ್ವೆ ನಂ.16ರಲ್ಲಿ 2022-23 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾನಗೋಡ ಗ್ರಾಮದ ದೊಡ್ಡಕೆರೆ ಹೂಳೆತ್ತುವ ಕಾಮಗಾರಿ ಪ್ರಾರಂಭವಾಗಿದೆ. ಈ ಕಾಮಗಾರಿಯಲ್ಲಿ ಶೇ 98ರಷ್ಟು ಪ್ರಮಾಣದಲ್ಲಿ ಮಹಿಳೆಯರೇ ಭಾಗವಹಿಸುತ್ತಿದ್ದು, ಮಂಗಳವಾರ ರೋಜಗಾರ್ ದಿನ ಆಚರಿಸಿ ಸಂಭ್ರಮಿಸಲಾಯಿತು.
ಸಿದ್ದಾಪುರದಿoದ ಸುಮಾರು 7-8 ಕಿ.ಮೀ. ದೂರದಲ್ಲಿರುವ ಕಾನಗೋಡ ಪಂಚಾಯತ್ ವ್ಯಾಪ್ತಿಯೂ ಅರಣ್ಯ ಪ್ರದೇಶವಾಗಿದ್ದರೂ ಸಹಿತ ಮಾರ್ಚ್, ಎಪ್ರಿಲ್ ನಂತರ ನೀರಿನ ಅಭಾವ ಸಹಜವಾಗಿರುತ್ತದೆ. ಜೊತೆಗೆ ಈ ಭಾಗದಲ್ಲಿ ಹೆಚ್ಚಿನ ಜನರು ಕೂಲಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಉದ್ಯೋಗ ಖಾತರಿ ಕೆಲಸಕ್ಕೆ ಬೇಡಿಕೆ ಜಾಸ್ತಿಯಿದ್ದು ಇಲ್ಲಿನ ಜನರು ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರೆ ಹೆಚ್ಚಿನ ಪ್ರಮಾಣದಲ್ಲಿ ಖಾತರಿ ಕೆಲಸಕ್ಕೆ ಆಗಮಿಸುತ್ತಿದ್ದು, ರಸ್ತೆ, ಕಾಲುವೆ, ಇಂಗುಗುಂಡಿ, ಕೆರೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಂಡು ಊರಿನ ಅಭಿವೃದ್ಧಿಗೆ ಮುಂದಾಗುತ್ತಿದ್ದಾರೆ.
ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ತೆವಳಕನ್ ಹೇಳುವಂತೆ ಕಾನಗೋಡ ಗ್ರಾಮದಲ್ಲಿ ಕೂಲಿಕಾರರು ಹೆಚ್ಚಾಗಿರುವುದರಿಂದ ಇಲ್ಲಿನ ಮಹಿಳೆಯರು ನರೇಗಾ ಕೆಲಸಕ್ಕೆ ಬೇಡಿಕೆ ಇಡುತ್ತಾರೆ. ಜೊತೆಗೆ ಪುರುಷರಿಗೆ ಸಮಾನರಂತೆ ಉತ್ತಮ ಗುಣಮಟ್ಟದ ಕೆಲಸ ಮಾಡುತ್ತಾರೆ ಎಂದರು. ಈ ವೇಳೆ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳು, ಎನ್ ಎಮ್ ಎಮ್ ಎಸ್‌ನಿಂದಾಗುವ ಉಪಯೋಗ, ಹಾಗು ಅಂತರ್ಜಲ ಮಟ್ಟ ಹೆಚ್ಚಿಸಲು ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ವಿವರಿಸಿದರು.
ಸುಮಾರು 43 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು ಐಗೋಡ ಹಾಗೂ ಕಾನಗೋಡ ಗ್ರಾಮಗಳಿಗೆ ಅನುಕೂಲವಾಗುವಂತಿದೆ.ಇನ್ನು ಈ ಕೆರೆ ಕಾಮಗಾರಿಯಿಂದಾಗಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಏರಿಕೆ ಕಂಡಿದ್ದು ಕೆರೆ ಸುತ್ತಲಿನ ಗ್ರಾಮಗಳಲ್ಲಿ ಮನೆಗೊಂದರAತೆ ಬಾವಿಗಳಿವೆ. ನೀರಿನ ಪ್ರಮಾಣವು ಅಧಿಕಗೊಂಡಿದೆ. ಸಂಜೆ ಹೊತ್ತಿನಲ್ಲಿ ವಾಯುವಿಹಾರಕ್ಕೆಂದು ಆಗಮಿಸುವವರಿಗೆ ಯೋಗ್ಯವಾದ ಸ್ಥಳ ಇದಾಗಿದೆ. ಇನ್ನು ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರು ಈಜಲು ಅನುಕೂಲವಾಗಿದೆ.ದನಕರುಗಳು, ಪ್ರಾಣಿ ಪಕ್ಷಿಗಳ ದಾಹ ನೀಗಿಸುತ್ತಿದೆ. ರೈತರ ಹೊಲಗಳು ವರ್ಷಪೂರ್ತಿ ಕಂಗೊಳಿಸುತ್ತಿವೆ. ಜೊತೆಗೆ ತರಕಾರಿ, ಬೇಳೆಕಾಳುಗಳನ್ನು ಬೆಳೆಯಲು ಅನುಕೂಲವಾಗುತ್ತಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಧುಕರ್ ಆಗೇರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.