Slide
Slide
Slide
previous arrow
next arrow

ಕುಡಿಯುವ ನೀರಿನ ಸಮಸ್ಯೆ: ಡಿಸಿ ನೇತೃತ್ವದಲ್ಲಿ ಶಾಸಕರುಗಳ ಸಭೆ

300x250 AD

ಕಾರವಾರ: ಕುಡಿಯುವ ನೀರಿನ ಸಮಸ್ಯೆಯ ಕುರಿತು ಕಾರವಾರ ಹಾಗೂ ಭಟ್ಕಳ ಕ್ಷೇತ್ರದ ನೂತನ ಶಾಸಕರಾದ ಸತೀಶ ಸೈಲ್ ಮತ್ತು ಮಂಕಾಳ ವೈದ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು. ಕಾರವಾರ ತಾಲೂಕಿಗೆ ಸಂಬoಧಿತ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿದ್ದರೆ, ಅಂಕೋಲಾ, ಹೊನ್ನಾವರ, ಭಟ್ಕಳ ತಾಲೂಕಿನ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಹಾಜರಾದರು.
ಶಾಸಕರುಗಳಾದ ಸತೀಶ್ ಸೈಲ್ ಮತ್ತು ಮಂಕಾಳ ವೈದ್ಯ ತಮ್ಮ ತಮ್ಮ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು, ಜನಪರ ದೃಷ್ಟಿಯಿಂದ ಶಾಸಕರ ಮನವೊಲಿಸಿ ಕೆಲವು ಆದೇಶಗಳನ್ನು ಎಲ್ಲಾ ಅಧಿಕಾರಿಗಳು ಪಾಲಿಸತಕ್ಕದೆಂದು ಸಭೆಯಲ್ಲಿ ಸೂಚಿಸಿದರು.
ಈಗಿರುವ ಪದ್ಧತಿಯಂತೆ ಎರಡು ದಿನಕ್ಕೊಮ್ಮೆ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಪೂರೈಸುವ ಬದಲು ದಿನಂಪ್ರತಿ ಪೂರೈಸಬೇಕು. ಎಲ್ಲಾ ಬೋರ್ವೆಲ್‌ಗಳನ್ನು ಅವಶ್ಯಕತೆ ಇದ್ದರೆ ದುರಸ್ತಿ ಮಾಡಿಸಬೇಕು. ಹೊಸ ಬೋರ್ವೆಲ್‌ಗಳ ಅವಶ್ಯಕತೆ ಇದ್ದರೆ ಅವುಗಳನ್ನು ನಿರ್ಮಿಸಿ. ಉಪ್ಪು ನೀರು ಮಿಶ್ರಿತ ಕುಡಿಯುವ ನೀರು ಪೂರೈಸಬಾರದು. ಸೀಬರ್ಡ್ ನಿರಾಶ್ರಿತರ ಕಾಲೋನಿಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಜೆಜೆಎಂ ಯೋಜನೆ ಅಡಿಯಲ್ಲಿ ನಿರ್ಮಿತ ಕುಡಿಯುವ ನೀರು ಎಷ್ಟು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಬಳಕೆದಾರರ ಆಕ್ಷೇಪಣೆ ಇದ್ದರೆ ಸಂಗ್ರಹಿಸಿ ಮೂರು ದಿನದೊಳಗೆ ವರದಿ ಒಪ್ಪಿಸಬೇಕು. ಪಂಚಾಯತ್‌ಗಳಲ್ಲಿ ಹಣದ ಅಭಾವ ಇದೆ ಎಂದು ಎಲ್ಲಿಯೂ ಕುಡಿಯುವ ನೀರಿಗೆ ತತ್ವಾರ ಬಾರದ ಹಾಗೆ ಅಧಿಕಾರಿಗಳು ನೋಡಿಕೊಳ್ಳಬೇಕು. ಎಲ್ಲಾ ತಾಲೂಕುಗಳ ಕುಡಿಯುವ ನೀರು ಸರಬರಾಜು ನೋಡಲ್ ಅಧಿಕಾರಿಗಳ ಮತ್ತು ನೀರು ಪೂರೈಸುವ ಕಾಂಟ್ರ‍್ಯಾಕ್ಟ್ದಾರರ ಮೊಬೈಲ್ ಸಂಖ್ಯೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಅವಶ್ಯಕತೆ ಇದ್ದವರು ದಿನದ ಯಾವ ಸಮಯದಲ್ಲಿಯೂ ಅಧಿಕಾರಿಗಳನ್ನು ಅವರವರ ದೂರವಾಣಿಗಳಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಾರವಾರ ತಾಲೂಕಿಗೆ ಕದ್ರಾ ಕೆಪಿಸಿ ಡ್ಯಾಂ ಒಳಗಿನಿಂದ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಅಂಕೋಲಾ ತಾಲೂಕಿನ ಗುಂಡಬಾಳ ಮರಕಾಲ್‌ನಿಂದ ಪ್ರಾರಂಭವಾಗುವ ಗೋಕರ್ಣ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಸಗಡಗೇರಿ, ಅಗ್ರಗೋಣ, ಹೊನ್ನೇಬೈಲ್, ಬೇಳಂಬರ್ ಪಂಚಾಯತಗಳಿಗೂ ವಿಸ್ತರಿಸಬೇಕು. ಹಟ್ಟಿಕೇರಿ ಬತ್ತದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿ ಬೇಲೇಕೇರಿ ಸೀಬರ್ಡ್ ಕಾಲೋನಿಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲು ಅವಶ್ಯಕತೆ ಇರುವ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

300x250 AD
Share This
300x250 AD
300x250 AD
300x250 AD
Back to top