ಶಿರಸಿ: ನಗರದ ಮರಾಠಿಕೊಪ್ಪದ ಅಂಜನಾದ್ರಿ ಶ್ರೀಮಾರುತಿ ದೇವಸ್ಥಾನದ 8ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿ0ದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಗಳು ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.
ಅನಾದಿ ಕಾಲದಿಂದಲೂ ಅಂಜನಾದ್ರಿ ಮಾರುತಿ ಎಂದೇ ಕರೆಸಿಕೊಳ್ಳುವ ಇಲ್ಲಿನ ಈ ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳಿದ್ದಾರೆ. ಪ್ರತಿ ಶನಿವಾರದಂದು ಐನೂರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡಿ ಪ್ರಸಾದ ಸ್ವೀಕರಿಸುವುದು ಪದ್ಧತಿಯಾಗಿದೆ. ಕೇವಲ ಒಂದು ಮಂಟಪದಲ್ಲಿ ಆಶ್ರಯ ಪಡೆದಿದ್ದ ಶ್ರೀಮಾರುತಿ ಇದೀಗ ಭವ್ಯ ಮಂಟಪದಲ್ಲಿ ರಾರಾಜಿಸುತ್ತಿದ್ದಾನೆ. ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ದೇವಾಲಯದ ಜೀರ್ಣೋದ್ಧಾರಕ್ಕೆ ತಮ್ಮದೇ ಆದ ಸೇವೆ ನೀಡಿದ್ದಾರೆ. ಅಲ್ಲದೇ ಅನೇಕ ಭಕ್ತರೂ ಕೂಡ ದೇವಾಲಯ ಅಭಿವೃದ್ಧಿಗೆ ಶ್ರಮಿಸಿದ್ದು, ತಮ್ಮದೇ ಆದ ಶ್ರೀಮಾರುತಿ ದೇವಾಲಯ ಸಮಿತಿ ರಚಿಸಿಕೊಂಡಿದ್ದು, ಆ ಮೂಲಕ ದೇವಾಲಯದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಇನ್ನು ಶ್ರೀಮಾರುತಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಸಂಕಲ್ಪಿಸಿಕೊoಡ ದೇವರ ಕಾರ್ಯದಲ್ಲಿ ಅನೇಕ ಧಾರ್ಮಿಕ ಕೈಂಕರ್ಯಗಳು ಜತುಗಿದವು. ಕಲಶ ಸ್ಥಾಪನೆ, ಕಲಾವೃದ್ಧಿ ಹವನ, ಆಂಜನೇಯ ಮೂಲಮಂತ್ರ ಹವನ, ಪೂರ್ಣಾಹುತಿ, ಕಲಾಭಿಷೇಕ ನಂತರ ಮಹಾಮಂಗಳಾರತಿ ಮಾಡಲಾಯಿತು. ಸಾವಿರಾರು ಭಕ್ತರು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದ್ರು. ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಕೂಡ ವ್ಯವಸ್ಥೆ ಮಾಡಲಾಗಿತ್ತು. ಕದಂಬ ಸೇವಾ ರತ್ನ ಪ್ರಶಸ್ತಿ ವಿಜೇತ ಭೋಜರಾಜ್ ಶಿರಾಲಿ ಅವರ ಸ್ವರ ಸಂಗಮ ಬಳಗದ ವತಿಯಿಂದ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಶ್ರೀ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯ ಧರ್ಮದರ್ಶಿಗಳು, ನೆಮ್ಮದಿ ಕುಟೀರದ ವಿ.ಪಿ.ವೈಶಾಲಿ ಹಾಗೂ ಶ್ರೀಮಾರುತಿ ದೇವಾಲಯ ಸಮಿತಿ ಅಧ್ಯಕ್ಷ ಕಿರಣ್ ಚಿತ್ರಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.