ಗೋಕರ್ಣ: ಗೋಕರ್ಣ ವ್ಯಾಪ್ತಿಯಲ್ಲಿ ಕುಮಟಾ ವಿಧಾನಸಭಾ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಕೆಲವು ಭಾಗಗಳಿಗೆ ಭೇಟಿ ನೀಡಿ ಮತದಾನದ ಕುರಿತು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ನಂತರ ಅವರು ಮಾತನಾಡಿ, ನಮ್ಮ ಪಕ್ಷದ ಯಾರೇ ಬಂದರೂ ಅವರಿಗೆ ತೊಂದರೆಯಾಗದಂತೆ ಮತದಾನ ನಡೆಸಿ ಕಳಿಸಬೇಕು ಎಂದು ಕಾರ್ಯಕರ್ತರೊಂದಿಗೆ ಚರ್ಚಿಸಿದರು.
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಪರವಾಗಿ ತೊರ್ಕೆಯಲ್ಲಿ ಬಿಜೆಪಿ ಮುಖಂಡ ನಾಗರಾಜ ನಾಯಕ ಬೂತ್‌ನಲ್ಲಿಯೇ ಕುಳಿತು ಮತದಾರರ ಆಗಮನವನ್ನು ಕಾಯುತ್ತಿದ್ದುದು ಅಲ್ಲಿ ಮತದಾರರಿಗೆ ತೊಂದರೆಯಾಗದಂತೆ ಅವರನ್ನು ನೋಡಿಕೊಂಡರು. ಇನ್ನು ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ಕೂಡ ಅಲ್ಲಲ್ಲಿ ಬೇಡಿ ಪರಿಶೀಲನೆ ನಡೆಸಿದರು.
ಒಟ್ಟಿನಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಚುನಾವಣಾ ಬಹಿರಂಗ ಪ್ರಚಾರ, ಮನೆ ಮನೆ ಪ್ರಚಾರ ಎಲ್ಲವೂ ಮುಕ್ತಾಯಗೊಂಡು ಬುಧವಾರ ಮತದಾನ ಶಾಂತಿಯುತವಾಗಿ ನಡೆಯಿತು. ಕೆಲವರು ಮತ ಚಲಾವಣೆಗೊಂಡ ನಂತರ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಲ್ಲಿ ಮುಖ್ಯವಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದು, ಈ ಮೂವರ ಹಣೆಬರಹ ಮೇ.13 ರಂದು ಬಹಿರಂಗಗೊಳ್ಳಲಿದೆ.