ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಅಡಿಯಲ್ಲಿ 82 ಕೋಟಿ ರೂ. ಪರಿಹಾರ ಜಮಾ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಹೇಳಿದರು.
ಅವರು ಗುರುವಾರ ನಗರ ಪಂಡಿತ ದೀನ್ ದಯಾಳ ಸಮುದಾಯಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳೆ ವಿಮೆ ಪರಿಹಾರಕ್ಕೆ ಸಂಬಂಧಿಸಿ ರೈತರು ಕಂಗಾಲಾಗಿದ್ದರು. ಮಳೆ ಮಾಹಿತಿ ಸರಿಯಾಗಿ ನೀಡಿಲ್ಲ ಎಂಬ ಕಾರಣಕ್ಕೆ ಕ್ಷೇಮಾ ಇನ್ಸುರೆನ್ಸ್ ಕಂಪೆನಿ ವಿಮಾ ಪರಿಹಾರಕ್ಕೆ ಆಕ್ಷೇಪಣೆ ಸಲ್ಲಿಸಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಮುತುವರ್ಜಿ ವಹಿಸಿ ರೈತರಿಗೆ ವಿಮೆ ಕೊಡಿಸುವಲ್ಲಿ ಸಫಲರಾಗಿದ್ದು, ಜಿಲ್ಲೆಯ ಸುಮಾರು 35 ಸಾವಿರ ರೈತರಿಗೆ ಇನ್ಸುರೆನ್ಸ್ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿದೆ ಎಂದರು.
ದೇಶದ ಭದ್ರತೆಯ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸೈನಿಕರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಭೂಸ್ವಾಧೀನ ಪ್ರಕ್ರಿಯೆ ರಾಜ್ಯ ಸರಕಾರದ್ದು: ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಮಾತನಾಡಿ, ಸಾಗರಮಾಲಾ ಯೋಜನೆಯ ಕುಮಟಾ- ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ರದ್ದು ಆದ ಯೋಜನೆಯಾಗಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಿದ್ದ ವೇಳೆ ವಿಶೇಷ ಆಸಕ್ತಿ ವಹಿಸಿ, ಯೋಜನೆಗೆ ಮರು ಜೀವ ತಂದಿದ್ದರು. ಆನಂತರ ಪರಿಸರ ವಾದಿಗಳು ಅರಣ್ಯ ನಾಶವಾಗುತ್ತದೆ. ಈ ಯೋಜನೆ ಕೈಬಿಡಬೇಕು ಎಂದು ಹಸಿರುಪೀಠದಲ್ಲಿ ಪ್ರಕರಣ ದಾಖಲಿಸಿದ್ದರು. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದರೂ ಇತ್ಯರ್ಥವಾಗಿ ಕೆಲಸ ಆರಂಭಗೊಂಡಿತು. ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಪರಿಹಾರದ ಮೊತ್ತ ಕುಮಟಾ ಸಹಾಯಕ ಆಯುಕ್ತರ ಕಚೇರಿಯಲ್ಲಿ 10 ಕೋಟಿ ರೂ. ಹಾಗೆಯೇ ಇದೆ ಎಂದರು.
ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ಜಾಗ ಹಸ್ತಾಂತರಿಸುವುದು ರಾಜ್ಯ ಸರ್ಕಾರದ ಕೆಲಸವಾಗಿದ್ದು, ಶಿರಸಿ-ಹಾವೇರಿ ರಸ್ತೆಯಲ್ಲಿಯೂ ಅರಣ್ಯ ಭೂಮಿ ಜಾಗಕ್ಕೆ ಬಿಜಾಪುರದಲ್ಲಿ ಪರ್ಯಾಯ ಜಾಗ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಆಡಳಿತ ಪಕ್ಷದ ಶಾಸಕರು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ ನಾಯ್ಕ, ಗುರುಪ್ರಸಾದ ಹೆಗಡೆ ಹರ್ತೆಬೈಲ್, ಕೋರ್ ಕಮಿಟಿ ಸದಸ್ಯ ಆರ್.ಡಿ.ಹೆಗಡೆ ಜಾನ್ಮನೆ, ಬಿಜೆಪಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಪ್ರಮುಖರಾದ ಆರ್.ವಿ.ಹೆಗಡೆ ಚಿಪಗಿ, ರವಿಚಂದ್ರ ಶೆಟ್ಟಿ ಮತ್ತಿತರರು ಇದ್ದರು.
ಬೆಳೆ ವಿಮೆ ವಂತಿಗೆ ಪಾವತಿಸಿದ್ದರೂ ಪರಿಹಾರ ವಿತರಣೆಗೆ ವಿಮಾ ಕಂಪೆನಿ ಹಿಂದೇಟು ಹಾಕುತ್ತಿದ್ದರೂ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ರೈತರ ಬಗ್ಗೆ ಮೌನ ವಹಿಸಿದ್ದಾರೆ.ಅಲ್ಲದೇ ವರ್ಷವೂ ಮಳೆ ಮಾಪನ ನಿರ್ವಹಣೆ ಮಾಡಿಲ್ಲ. 2024-25 ನೇ ಸಾಲಿನ ಬೆಳೆ ವಿಮೆ ಪರಿಹಾರ ನೀಡಲು ಕಂಪೆನಿ ಆಕ್ಷೇಪಣೆ ಸಲ್ಲಿಸುತ್ತದೆ. ಮಳೆ ಮಾಪನ ಕೇಂದ್ರ ಸರಿಯಾಗಿ ನಿರ್ವಹಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಆದೇಶಿಸಿದೆ. ಆದರೂ ಅದರ ಕುರಿತು ನಿರ್ಲಕ್ಷ್ಯವಹಿಸಿದ್ದಾರೆ. ಈಗಾದರೂ ಮಳೆ ಮಾಪನ ಕೇಂದ್ರ ನಿರ್ವಹಣೆ ಆಗಲಿ, ರಾಜ್ಯ ಸರ್ಕಾರವೂ ವಿಮಾ ಹಣ ಕೊಡಿಸಲು ಸಹಕರಿಸಲಿ
ಎನ್.ಎಸ್.ಹೆಗಡೆ
ಬಿಜೆಪಿ ಜಿಲ್ಲಾಧ್ಯಕ್ಷ