ಶಿರಸಿ: ಕ್ಷಯ ರೋಗವನ್ನು ತಡೆಗಟ್ಟುವಲ್ಲಿ ಬಿಸಿಜಿ ಚುಚ್ಚುಮದ್ದು ಅತ್ಯಂತ ಪರಿಣಾಮಕಾರಿಯಾದದ್ದು ಎಂದು ನಗರ ಆರೋಗ್ಯ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಭಾರತಿ ಹೊಸಮನಿ ಅಭಿಪ್ರಾಯಪಟ್ಟರು.
ಅವರು ನಗರದ ಆರೋಗ್ಯ ಕೇಂದ್ರದಲ್ಲಿ ನಡೆದ ವಯಸ್ಕ ಬಿಸಿಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಗೌರಿ ಸಿ. ನಾಯ್ಕ್ ಮಾತನಾಡಿ ಕ್ಷಯ ಮುಕ್ತ ಭಾರತ ಮಾಡುವಲ್ಲಿ ಬಿಸಿಜಿ ಚುಚ್ಚುಮದ್ದು ಅತಿ ಅವಶ್ಯಕವಾಗಿದ್ದು ಇದನ್ನು ಎಲ್ಲರೂ ಪಡೆಯಬೇಕು ಎಂದರು. ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಉದಯಶಂಕರ ಮಾತನಾಡಿ ನಮ್ಮ ಜೀವಿತಾವಧಿಯಲ್ಲಿ ಕ್ಷಯ ರೋಗ ಬರದಂತೆ ತಡೆಯಲು ಬಿಸಿಜಿ ಚುಚ್ಚುಮದ್ದು ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡೆಯಬೇಕು. ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಕರು, ಕಳೆದ ಐದು ವರ್ಷಗಳಿಂದ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾದವರು, ಹಾಗೂ ಅವರ ನಿಕಟ ಸಂಪರ್ಕಿತರು, ಸಕ್ಕರೆ ಕಾಯಿಲೆ ಉಳ್ಳವರು, ಧೂಮಪಾನಿಗಳು, ಹಾಗೂ ಬಿಎಂಐ 18 ಕ್ಕಿಂತ ಕಡಿಮೆ ಇರುವವರು ಮೊದಲ ಹಂತದಲ್ಲಿ ಕಡ್ಡಾಯವಾಗಿ ಬಿಸಿಜಿ ಲಸಿಕೆ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕರಾದ ಶ್ರೀಮತಿ ಲತಾ ಆಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರೆ ಆರೋಗ್ಯ ನಿರೀಕ್ಷಕರಾದ ಕುಮಾರಿ ಚಂದನ ಸ್ವಾಗತಿಸಿದರು. ಟಿಬಿಎಚ್ ವಿ ಅಶೋಕ ಹಾಗೂ ಆರೋಗ್ಯ ನಿರೀಕ್ಷಕ ವಿ.ಸಿ ಹಿರೇಮಠ್ ನಿರೂಪಿಸಿದರೆ ದತ್ತಾತ್ರೇಯ ಹೆಗಡೆರವರು ವಂದಿಸಿದರು. ನರ್ಸಿಂಗ್ ಆಫೀಸರ್ ಗಳಾದ ಶಾಂತಿಕಾ, ಶಾಯಿನ್ನ, ಮತ್ತು ಭಾಗೀರಥಿ ರವರು ವ್ಯಾಕ್ಸಿನೇಟರ್ ಆಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಗರ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಫಲಾನುಭವಿಗಳು ವಯಸ್ಕ ಬಿಸಿಜಿ ಚುಚ್ಚುಮದ್ದನ್ನು ಪಡೆದರು.