ಕಾರವಾರ: ಜಿಲ್ಲೆಯ ಸುತ್ತಲಿನ ಜಿಲ್ಲೆಗಳಿಗಿಂತ ನಮ್ಮ ಉತ್ತರ ಕನ್ನಡ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ದಾಖಲೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಈಶ್ವರ್ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಫಲಿತಾಂಶ ಶೇಕಡ 90.53ದೊಂದಿಗೆ ಹಿಂದಿನ ವರ್ಷದ 17ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಉತ್ತಮ ಪಡಿಸಿಕೊಂಡಿದೆ. ಹಿಂದಿನ ವರ್ಷ 89ರಷ್ಟಿದ್ದ ಫಲಿತಾಂಶ ಈ ವರ್ಷ 90.53% ರಷ್ಟಾಗುವುದರೊಂದಿಗೆ 1.53 % ಹೆಚ್ಚು ಫಲಿತಾಂಶ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 197 ಪ್ರೌಢಶಾಲೆಗಳಿದ್ದು, 52 ಪ್ರೌಢಶಾಲೆಗಳು 100% ಫಲಿತಾಂಶ ಪಡೆದಿದೆ. ಅದರಲ್ಲಿ 17 ಸರ್ಕಾರಿ ಪ್ರೌಢಶಾಲೆ, 13 ಅನುದಾನಿತ ಪ್ರೌಢಶಾಲೆಗಳು ಹಾಗೂ 22 ಅನುದಾನ ರಹಿತ ಪ್ರೌಢಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ಪಡೆದಿದೆ.
ಜಿಲ್ಲೆಯ 27 ವಿದ್ಯಾರ್ಥಿಗಳು ರಾಜ್ಯದ 4 ರಿಂದ 10ನೇ ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ 1ರಿಂದ 10ನೇ ರ‍್ಯಾಂಕ್‌ಗಳಲ್ಲಿ 46 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಈ ಗರಿಷ್ಠ ಗುಣಾತ್ಮಕ ಸಾಧನೆಗೆ ಉತ್ತಮ ಬೋಧನೆ ಮತ್ತು ಮಾರ್ಗದರ್ಶನ ನೀಡಿ ಈ ಸಾಧನೆಗೆ ಕಾರಣೀಭೂತರಾದ ಜಿಲ್ಲೆಯ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಯ ಮುಖ್ಯಾಧ್ಯಾಪಕರುಗಳಿಗೆ ಹಾಗೂ ಸಹ ಶಿಕ್ಷಕರುಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಾರ್ಯ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದ ಪರೀಕ್ಷಾ ಕೇಂದ್ರದ ಅಧೀಕ್ಷಕರಿಗೆ, ಡಯಟ್ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ, ಜಿಲ್ಲಾ ನೋಡಲ್ ಅಧಿಕಾರಿಗಳಿಗೆ, ತಾಲೂಕಿನ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಕಚೇರಿಯ ಸಿಬ್ಬಂದಿಗಳಿಗೆ, ಹಾಗೂ ತಾಲೂಕಿನ ಎಲ್ಲ ನೋಡಲ್ ಅಧಿಕಾರಿಗಳಿಗೆ, ಹಾಗೂ ಮಕ್ಕಳ ಸಾಧನೆಗೆ ಉತ್ತಮ ಪ್ರೋತ್ಸಾಹ ನೀಡಿದ ಜಿಲ್ಲೆಯ ಎಲ್ಲಾ ಪಾಲಕರಿಗೆ, ಎಸ್.ಡಿ.ಎಂ.ಸಿ ಹಾಗೂ ಆಡಳಿತ ಮಂಡಳಿಯವರಿಗೆ, ಉತ್ತಮ ಶೈಕ್ಷಣಿಕ ಸಾಧನೆಗೆ ಕಾರಣೀಭೂತರಾದ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರ ಸಂಘಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಅಲ್ಲದೇ ಎಸ್‌ಎಸ್‌ಎಲ್‌ಸಿಯಲ್ಲಿ ಗರಿಷ್ಠ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳನ್ನು ಅವರು ತಿಳಿಸಿದ್ದಾರೆ.