ಶಿರಸಿ: ಮಾರ್ಚ್ 2023ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಕುಳಿತ 40 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 97.5 ಶಾಲಾ ಫಲಿತಾಂಶವನ್ನು ಸಾಧಿಸಿದೆ.
ಕುಮಾರ್ ಹರಿಪ್ರಸಾದ್ ಶೇಖರ ಪೂಜಾರಿ ಶೇಕಡಾ 89.92 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಹಾಗೂ ಕುಮಾರಿ ದಿವ್ಯಾ ಮಾಬ್ಲೇಶ್ವರ ಮಡಿವಾಳ ಇವಳು ಶೇಕಡ 89.12 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಹಾಗೂ ಕುಮಾರಿ ವಿಂಧ್ಯಾ ಸಂತೋಷ ಹೆಗಡೆ ಇವಳು ಶೇಕಡ 88.32 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಅಲ್ಲದೆ ಗುಣಾತ್ಮಕ ಫಲಿತಾಂಶದಲ್ಲಿ 83 ಸಾಧಿಸುವುದರೊಂದಿಗೆ ತಾಲೂಕಿನಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಮುಖ್ಯೋಪಾಧ್ಯಾಯ ಗಣೇಶ ಭಟ್ ವಾನಳ್ಳಿ ತಿಳಿಸಿದ್ದಾರೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು ಇಲ್ಲಿ ಉಲ್ಲೇಖನೀಯ.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಎಮ್. ಹೆಗಡೆ ಹುಡೇಲಕೊಪ್ಪ ಹಾಗೂ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ಹಾಗೂ ಕಾರ್ಯದರ್ಶಿಗಳಾದ ಶ್ರೀಧರ್ ನಾಯಕ್ ಬಿಸಲಕೊಪ್ಪ ಇವರುಗಳು ಉಪಸ್ಥಿತರಿದ್ದು ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಶಾಲೆಯಾಗಿ ಮಕ್ಕಳ ಆಂಗ್ಲ ಮಾಧ್ಯಮದ ವಲಸೆಯ ನಡುವೆಯೂ ನಮ್ಮ ಶಾಲೆ ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕಿನಲ್ಲಿ ತನ್ನದೇ ಆದ ಕೀರ್ತಿಯನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು.
ಸಾಧನೆ ಮಾಡಿದ ಎಲ್ಲ ಮಕ್ಕಳನ್ನು ಶಿಕ್ಷಕರನ್ನು ಸಹಕರಿಸಿದ ಪಾಲಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು. ಈಗಾಗಲೇ 8 ಮತ್ತು 9ನೇ ತರಗತಿಗೆ ದಾಖಲಾತಿ ಪ್ರಾರಂಭವಾಗಿದ್ದು ಹಲವು ವಿದ್ಯಾರ್ಥಿಗಳು ಬರುತ್ತಿರುವುದು ಸಂತೋಷದಾಯಕ ಎಂದು ತಿಳಿಸಿದರು.