ಕುಮಟಾ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವನ್ನು ಆಯೋಜಿಸಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿಗೆ 109 ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ, ಕನ್ನಡ ನಾಡು, ನುಡಿ, ಬೆಳವಣಿಗೆಗೆ ನೆರವಾಗಿದ್ದಾರೆ ಎಂದು ಮುಖ್ಯಾಧ್ಯಾಪಕ ಹಾಗೂ ಕನ್ನಡ ಪಂಡಿತ ಪಾಂಡುರಂಗ ಎಸ್. ವಾಗ್ರೇಕರ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಹನೀಯರ ಸ್ಮರಣೆಗೈದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಮಾತನಾಡಿ ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಂದಲೂ ಕನ್ನಡ ಉಳಿದಿದೆ. ಅಂತಹ ಕಾರ್ಯವನ್ನು ಜಿಲ್ಲಾ ಪರಿಷತ್ತಿನ ಆಶಯದಂತೆ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು. ಭಾಷೆಯ ಬೆಳವಣಿಗೆಗೆ ಪ್ರೇರಕವಾದ ಅಂಶಗಳನ್ನು ಮೈಗೂಡಿಸಿಕೊಂಡು ಹಿರಿಯ ಸಾಹಿತಿಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದು ಕವಿ ಬೀರಣ್ಣ ನಾಯಕ ಈ ದಿನಕ್ಕಾಗಿಯೇ ರಚಿಸಿ ಕಳುಹಿಸಿದ ಚುಟುಕುಗಳನ್ನು ಬರಹಗಾರ ಎನ್.ಆರ್. ಗಜು ವಾಚಿಸಿ ಗಮನಸೆಳೆದರು.
ಜಿಲ್ಲಾ ಕಸಾಪ ಸದಸ್ಯರಾದ ಪಿ.ಎಂ.ಮುಕ್ರಿ ಅಗಾಧವಾಗಿರುವ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪ್ರತಿ ಮನೆ ಹಾಗೂ ಮನಗಳಿಗೆ ತಲುಪುವಂತಾಗುವ ನಿಟ್ಟಿನಲ್ಲಿ ಕಸಾಪ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಕಸಾಪ ಗೌರವ ಕಾರ್ಯದರ್ಶಿ, ಸಾಹಿತಿ ವನ್ನಳ್ಳಿ ಗಿರಿ ಸ್ವಾಗತಿಸಿ ನಿರೂಪಿಸಿದರೆ, ಸದಸ್ಯರಾದ ಎಸ್.ಬಿ.ನಾಯ್ಕ ವಂದಿಸಿದರು.