ಹಳಿಯಾಳ: ತಾಲೂಕಿನ ತೇಗ್ನಳ್ಳಿ, ಬಾಣಸಗೇರಿ, ಹಡಗಲಿ, ಜನಗಾ, ನಂದಿಗದ್ದಾ, ಬಸವಳ್ಳಿ, ದೊಡ್ಡಕೊಪ್ಪ, ಬಂಟರಗಾಳಿ, ಅಜಮನಾಳ ತಾಂಡಾ ಹಾಗೂ ಮುಂತಾದ ಭಾಗಗಳಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರು ಸ್ಥಳೀಯ ಮತದಾರರ ಸಭೆ ನಡೆಸಿ, ಮತಯಾಚಿಸಿದರು.
ವಿಶೇಷವಾಗಿ ಜನಗಾ ಹಾಗೂ ದೊಡ್ಡಕೊಪ್ಪ ಗ್ರಾಮಗಳಲ್ಲಿ ವಿವಿಧ ಪಕ್ಷಗಳನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಹಿರಿಯರಿಗೆ ಹಾಗೂ ಯುವಕರಿಗೆ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಅವರು ಕ್ಷೇತ್ರದ ಜನರಿಗೆ ಅನೇಕ ಅಭಿವೃದ್ಧಿ ಹಾಗೂ ಯೋಜನೆಗಳನ್ನು ತರುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತ ಬಂದು ಈಗ ನಡೆಯುತ್ತಿರುವ ಚುನಾವಣೆ ಬೆನ್ನಲ್ಲೇ ಮತಗಳನ್ನು ಒಡೆಯುವ ನಿಟ್ಟಿನಲ್ಲಿ ಬೇರೆ ಬೇರೆ ಪಕ್ಷದಿಂದ ಸ್ಪರ್ಧಿಸುತ್ತ ವಿವಿಧ ರೀತಿಯ ನಾಟಕ ಮಾಡುತ್ತಿರುವ ಆರ್.ವಿ.ದೇಶಪಾಂಡೆ ಹಾಗೂ ಎಸ್.ಎಲ್.ಘೋಟ್ನೇಕರ ಅವರ ವಿರುದ್ಧ ಕಿಡಿಕಾರಿದರು.
ಕ್ಷೇತ್ರದ ಜನರು ಈ ಬಾರಿ ಮತ ಚಲಾವಣೆ ಮಾಡುವ ಮುನ್ನ ಹತ್ತು ಬಾರಿ ವಿಚಾರ ಮಾಡಿ ಧರ್ಮದ ರಕ್ಷಣೆ ಜೊತೆಗೆ ಮುಂದಿನ ಪೀಳಿಗೆಯ ಒಳ್ಳೆಯ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಿ, ನನ್ನನ್ನು ಈ ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿ ತಮ್ಮೆಲ್ಲರ ಸೇವೆಯನ್ನು ಮಾಡುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಮತದಾರರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ಗಣಪತಿ ಕರಂಜೇಕರ, ಉಪಾಧ್ಯಕ್ಷರಾದ ವಾಸುದೇವ ಪೂಜಾರಿ, ಪ್ರಮುಖರಾದ ಶಿವಾಜಿ ಪಾಟೀಲ್, ನಾಗೇಂದ್ರ ಜಿವೋಜಿ, ಹನುಮಂತ ಚಿನಗಿನಕೊಪ್ಪ, ರೀಟಾ ಸಿದ್ಧಿ, ಜಯಲಕ್ಷ್ಮೀ ಚವ್ಹಾಣ, ಪುಷ್ಪಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.