ಹಳಿಯಾಳ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ ಅವರನ್ನು ಜೆಡಿಎಸ್ ಪಕ್ಷದಲ್ಲಿ ಇರುವಂತೆ ತೋರಿಸಿ, ಹಿಂದೂಗಳ ಮತಗಳನ್ನು ಒಡೆದು ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಅವರನ್ನು ಈ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆರಿಸಿ ತರುವುದೇ ದೇಶಪಾಂಡೆ ಮತ್ತು ಘೋಟ್ನೇಕರ ಅವರ ಚುನಾವಣಾ ಒಳ ಒಪ್ಪಂದದ ಟೂಲ್‌ಕಿಟ್ ಆಗಿದೆ ಎಂದು ಮಾಜಿ ಶಾಸಕ ಹಾಗೂ ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಆರೋಪಿಸಿದರು.
ಅವರು ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಎದುರಾಳಿ ಅಭ್ಯರ್ಥಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ 35 ವರ್ಷಗಳಿಂದ ಜೊತೆಯಲ್ಲಿದ್ದ ಘೊಟ್ನೇಕರ ಅವರು ಚುನಾವಣೆ ಸಂದರ್ಭದಲ್ಲಿಯೇ ಏಕೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಕ್ಷ ಸೇರಿದರು? ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಜೆಡಿಎಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕೆ.ಆರ್.ರಮೇಶ್ ಇಂದು ದೇಶಪಾಂಡೆ ಅವರ ಜೊತೆಯಲ್ಲಿದ್ದಾರೆ. ಜನತೆ ದೇಶಪಾಂಡೆ ಅವರ ಒಳರಾಜಕಾರಣ ಸರಿಯಾಗಿ ಅರ್ಥ ಮಾಡಿಕೊಂಡರೆ ಯಾವತ್ತೂ ನೀವುಗಳು ಕಾಂಗ್ರೆಸ್ಸಿಗೆ ಮತ ನೀಡುವುದಿಲ್ಲ ಎಂದರು.
ಹಳಿಯಾಳ ಕ್ಷೇತ್ರದಲ್ಲಿ 40 ವರ್ಷಗಳಿಂದ ಅಧಿಕಾರದಲ್ಲಿರುವ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ ಹಳಿಯಾಳ ಕ್ಷೇತ್ರಕ್ಕೆ ತೀರಾ ಅನ್ಯಾಯ ಮಾಡಿದ್ದು, ಕ್ಷೇತ್ರ ಅಧೋಗತಿಗೆ ತಲುಪಿದೆ. ದೇಶಪಾಂಡೆ ಅವರ ಇನ್ನೊಂದು ಮುಖವೇ ಘೋಟ್ನೇಕರ ಹಾಗೂ ಒಂದೇ ಆಶಯ ಇರುವ ಎ ಮತ್ತು ಬಿ ಪಾರ್ಟಿ ಆಗಿದ್ದು, ಇವರಿಬ್ಬರು ಸದ್ಯ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಹಿಂದೂಗಳಲ್ಲಿ ಗೊಂದಲ ಮೂಡಿಸಿ ಪರೋಕ್ಷವಾಗಿ ದೇಶಪಾಂಡೆ ಆಯ್ಕೆ ಮಾಡಿಸುವುದೇ ಆಗಿದೆ ಎಂದರು.
ಕಾಳಿ ನದಿಯಿಂದ ಹಳಿಯಾಳ ಕ್ಷೇತ್ರಕ್ಕೆ ನೀರಾವರಿ ಯೋಜನೆ, ಕುಂಬ್ರಿ ಜಮೀನು ಸಮಸ್ಯೆ, ಕುಣಬಿಗಳಿಗೆ ಎಸ್‌ಟಿ ಮಾನ್ಯತೆ, ಅರಣ್ಯ ಅತಿಕ್ರಮಣ ಸಮಸ್ಯೆ ಹೀಗೆ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಇದರಲ್ಲಿ ಒಂದನ್ನಾದರೂ ದೇಶಪಾಂಡೆ ಹಾಗೂ ಘೋಟ್ನೇಕರ ಅವರು ಬಗೆಹರಿಸಿದ್ದಾರೆಯೇ? ಎಂದು ಪ್ರಶ್ನೀಸಿದ ಸುನೀಲ್ ಹೆಗಡೆ, ಪ್ರತಿಬಾರಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ, ಜನರ ದಿಕ್ಕು ತಪ್ಪಿಸುವ ದೇಶಪಾಂಡೆ ಅವರಿಗೆ ಈ ಬಾರಿ ಜಾಗೃತರಾಗಿ ಪಾಠ ಕಲಿಸಬೇಕಿದೆ ಎಂದು ಕರೆ ನೀಡಿದರು.
ಹಿಂದಿನ ಚುನಾವಣೆಯಲ್ಲಿ ಕಾಳಿನದಿ ನೀರು ಹಳಿಯಾಳದ ಕೆರೆಗಳಿಗೆ, ಕೃಷಿ ಜಮೀನುಗಳಿಗೆ ತಲುಪದೆ ಇದ್ದರೆ ಕಲ್ಲಿನಲ್ಲಿ ಹೊಡೆಯಿರಿ ಎಂದಿದ್ದ ಘೋಟ್ನೇಕರ ಹಾಗೂ ದೇಶಪಾಂಡೆ ಅವರಿಗೆ ಇಂದು ಯಾವುದರಲ್ಲಿ ಮತದಾರರು ಹೊಡೆಯಬೇಕೆಂದು ಅವರೇ ಹೇಳಬೇಕು ಎಂದ ಹೆಗಡೆ, ಸಂಗ್ಯಾ- ಬಾಳ್ಯಾ ನಾಟಕ ಆಡುವ ಈ ಇಬ್ಬರಿಗೆ ಈ ಬಾರಿ ಕ್ಷೇತ್ರದ ಜನ ಬಿಜೆಪಿಗೆ ಬೆಂಬಲಿಸುವ ಮೂಲಕ ತಕ್ಕ ಶಾಸ್ತಿ ಮಾಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ನಾಯಕರು ಭೋಗಸ್ ಗ್ಯಾರಂಟಿಗಳನ್ನು ಹಿಡಿದುಕೊಂಡು ಜನರನ್ನು ಮರಳು ಮಾಡಲು ಮನೆಗಳಿಗೆ ಬರುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ವಿಶ್ವಾಸಘಾತಕ, ಗ್ಯಾರಂಟಿದ್ರೋಹಿ ಎನ್ನುವುದಕ್ಕೆ ಹಿಮಾಲಚಲಪ್ರದೇಶ, ರಾಜಸ್ಥಾನ ಸರ್ಕಾರಗಳು ಗ್ಯಾರಂಟಿ ಹುಸಿಗೊಳಿಸಿದ್ದು ತಾಜಾ ನಿದರ್ಶನವಾಗಿದೆ. ಜನರು ಸುದ್ದಿವಾಹಿನಿಗಳು, ಪತ್ರಿಕೆಗಳ ಮೂಲಕ ಈ ಎಲ್ಲ ಮಾಹಿತಿಗಳನ್ನು ಅರಿತುಕೊಂಡು ಮತದಾನ ಮಾಡುವಂತೆ ಸುನೀಲ್ ಹೆಗಡೆ ಕರೆ ನೀಡಿದರು.