ಭಟ್ಕಳ: ದಿನ ಕಳೆದಂತೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲಾ ಪಕ್ಷದ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ವಿವಿಧ ರೀತಿಯ ಕಾರ್ಯತಂತ್ರ ಹೆಣೆಯುತ್ತಿದ್ದು, ಭಟ್ಕಳ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಪ್ರತಿ ಬೂತ್ ಮಟ್ಟದಲ್ಲಿ ಜನಜಾಗೃತಿ ಸಭೆಯನ್ನು ನಡೆಸುವ ಮೂಲಕ ಆರು ತಿಂಗಳ ಹಿಂದೆಯೇ ಚುನಾವಣಾ ತಾಲೀಮು ಆರಂಭಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಶ್ರದ್ಧಾಕೇಂದ್ರಗಳಲ್ಲಿ ಪೂಜೆ ಸಲ್ಲಿಸಿ ಮನೆ ಮನೆ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಿದ್ದಾರೆ.
ವೈಯಕ್ತಿಕವಾಗಿ ಜನಸಾಮಾನ್ಯರಿಗೆ ಸಹಾಯ ಸಹಕಾರ ನೀಡುವ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಯೂ ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಅಂತರದಲ್ಲಿ ಸೋಲು ಕಾಣಬೇಕಾಯಿತು ಎನ್ನುವ ಅನುಕಂಪದ ಜೊತೆಗೆ ಚುನಾವಣೆಯನ್ನು ಹಿಂದೆಂದಿಗಿಂತಲೂ ಶಿಸ್ತುಬದ್ಧವಾಗಿ ಎದುರಿಸಲು ಮುಂದಾದಂತೆ ಕಾಣಿಸುತ್ತಿರುವ ವೈದ್ಯ, ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸಿನ ಮೇಲೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇಬೇಕು ಎನ್ನುವ ಹಠಕ್ಕೆ ಬಿದ್ದಂತಿರುವ ಕಾರ್ಯಕರ್ತರು ವೈದ್ಯರ ಪ್ರತಿಯೊಂದು ಸೂಚನೆಗಳನ್ನೂ ಶಿರಸಾವಹಿಸಿ ಪಾಲಿಸುತ್ತಿದ್ದಾರೆ.
ಬೂತ್ ಮಟ್ಟದಲ್ಲಿ ನಡೆಸಿದ ಜನಜಾಗೃತಿ ಸಭೆ ಕ್ಷೇತ್ರದಲ್ಲಿ ದೊಡ್ಡದೊಂದು ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಳ್ಳುವುದಕ್ಕೆ ಸಹಕಾರಿಯಾಗಿದ್ದು, ಗೆಲುವಿನ ವಾತಾವರಣವನ್ನೂ ಸೃಷ್ಟಿಸಿದೆ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ ವೈದ್ಯರು. ಉಮೇದುವಾರಿಕೆ ಸಲ್ಲಿಕೆ ಕಾರ್ಯಕ್ರಮದ ದಿನ ಏಕ ಕಾಲದಲ್ಲಿ ಕ್ಷೇತ್ರದ ನಾಲ್ಕುನೂರಕ್ಕೂ ಹೆಚ್ಚು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಇದೀಗ ಮಾದರಿ ಮತ ಪತ್ರ ಮತ್ತು ಪ್ರಣಾಳಿಕೆಯ ಪ್ರತಿಯನ್ನು ತಾವು ನಂಬಿದ ದೇವರ ಮುಂದಿಟ್ಟು ಪೂಜೆ ಸಲ್ಲಿಸಿ ಮನೆ ಮನೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.