ಶಿರಸಿ: ದೂರದ ಅಮೇರಿಕದಲ್ಲಿರುವ ಯುವಜನತೆ, ವಿದ್ಯಾರ್ಥಿಗಳಿಗೆ ಈಗ ಆನ್‌ಲೈನ್ ಮೂಲಕ ಯಕ್ಷಗಾನದ ಪಾಠ ನಡೆಯುತ್ತಿದೆ. ಈ ಮೂಲಕ ಅವರನ್ನು ಸಿದ್ಧಪಡಿಸಿ ಕ್ಯಾಲಿಫೋರ್ನಿಯಾದಲ್ಲಿ ಅದೇ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ ಪ್ರಸ್ತುತಪಡಿಸುವ ಕಾರ್ಯ ಈಗ ನಡೆದಿದೆ.
ಯಕ್ಷಗಾನ ಕಲಾವಿದೆ, ಯಕ್ಷ ಕಲಾಸಂಗಮದ ಸುಮಾ ಹೆಗಡೆ ಗಡಿಗೆಹೊಳೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ವೀಡಿಯೋ ಕಾಲ್ ಆನ್‌ಲೈನ್ ಮೂಲಕ ಕ್ಯಾಲಿಫೋರ್ನಿಯಾದ ವಿದ್ಯಾರ್ಥಿಗಳು ಈಗ ಯಕ್ಷಗಾನವನ್ನು ತದೇಕಚಿತ್ತದಿಂದ ಕಲಿಯುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಕನ್ನಡ ಕೂಟ ಈಗ 50 ವರ್ಷಗಳನ್ನು ಕಳೆದಿದೆ. ಈ ಹಿನ್ನೆಲೆಯಲ್ಲಿ ಏ.30ರಂದು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಯಕ್ಷಗಾನ ಪ್ರಸಂಗವನ್ನು ಈ ವೇದಿಕೆಯಲ್ಲಿ ಪ್ರದರ್ಶಿಸುವಂತೆ ಕಲಾವಿದೆ ಸುಮಾ ಹೆಗಡೆ ಅವರಲ್ಲಿ ವಿನಂತಿಸಿದೆ.
ಆದರೆ, ದೂರದ ಅಮೇರಿಕಕ್ಕೆ ಎಲ್ಲ ಪಾತ್ರಧಾರಿಗಳನ್ನು ತೆರಳುವುದು ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ಸುಮಾ ಹೆಗಡೆ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅನಿವಾಸಿ ಭಾರತೀಯರನ್ನು ಸಂಪರ್ಕಿಸಿ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಉಳ್ಳವರ ಪಟ್ಟಿ ಮಾಡಿಕೊಂಡಿದ್ದಾರೆ. ಬಳಿಕ ಅವರೊಂದಿಗೆ ಯಕ್ಷಗಾನದ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ ವಿಡಿಯೋ ಕಾಲ್‌ಗಳ ಮೂಲಕ ಮಾತುಗಾರಿಕೆ, ಹಾವ ಭಾವ, ಹೆಜ್ಜೆ, ಕುಣಿತದ ತರಬೇತಿ ನೀಡುತ್ತಿದ್ದಾರೆ. ಅಮೇರಿದ ಸಮಯಕ್ಕೆ ಸರಿಹೋಗುವಂತೆ ಪ್ರತಿ ದಿನ ರಾತ್ರಿ, ಬೆಳಗಿನ ವೇಳೆ ಅವರಿಗೆ ವಿಡಿಯೋಕಾಲ್ ಮೂಲಕ ತರಬೇತಿ ನೀಡುತ್ತಿದ್ದಾರೆ.
ಯಕ್ಷಗಾನ ಒಂದು ಸಂಪೂರ್ಣ ಕಲೆ. ಕೆಲವೇ ದಿನಗಳಲ್ಲಿ ಈ ಕಲೆಯಲ್ಲಿ ಪಳಗಲು ಸಾಧ್ಯವಿಲ್ಲ. ಕಲಾವಿದರಿಂದ ವೇದಿಲೆಯಲ್ಲಿ ತಪ್ಪುಗಳೂ ಸಂಭವಿಸಬಹುದು ಎಂಬ ಭಯ ಮೊದಲು ಕಾಡಿತು ಎನ್ನುತ್ತಾರೆ ಸುಮಾ ಗಡಿಗೆಹೊಳೆ. ಆದರೆ, ಹೊರ ನಾಡಿನಲ್ಲೂ ನಮ್ಮ ಕಲೆ ಪಸರಿಸಿದರೆ ಆ ಧನ್ಯತೆಯೇ ಬೇರೆ. ಧೈರ್ಯ ಪಡದಿದ್ದರೆ ಅಲ್ಲಿಯವರ ಯಕ್ಷಗಾನ ಕಲಿಕೆಯ ಆಸಕ್ತಿ ಕಮರಿಹೋಗುತ್ತದೆ. ಮುಂದೆ ತಪ್ಪಾಗದಂತೆ ಅವರು ಬೆಳೆಯಬೇಕೆಂದರೆ ಕಲಾವಿದರಾಗಿ ನಾವು ಧೈರ್ಯ ತುಂಬಬೇಕು ಎನ್ನುತ್ತಾರೆ ಅವರು.
ಯಕ್ಷಗಾನದಲ್ಲಿ ಭಾಗವತಿಕೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಕಲಿಸುವುದು ಸುಲಭದ ಮಾತಲ್ಲ. ವಿಸಾ, ಪಾಸ್‌ಪೋರ್ಟ್ ರಗಳೆಯ ಮಧ್ಯೆ ನಮ್ಮ ಭಾಗವತರನ್ನು ಕರೆದೊಯ್ಯುವುದು ಕಷ್ಟ. ಹೀಗಾಗಿ, ಭಾಗವತಿಕೆಯ ಧ್ವನಿಮುದ್ರಣವನ್ನು ಮೇ 10ರಂದು ನಡೆಯುವ ರಾವಣಾವಸಾನ ಯಕ್ಷಗಾನದಲ್ಲಿ ಬಳಸಲು ನಿರ್ಧರಿಸಿದ್ದಾರೆ. ಅನಿವಾಸಿ ಭಾರತೀಯರಾದ ಲಲಿತಾ ಪಡುಬಿದ್ರಿ, ಶಿವರಾಮ ಭಟ್, ಉಷಾ ಹೆಬ್ಬಾರ್, ಮೇಘಾ ಹೇರೂರು, ಸಮರ್ಥ ಭೂಷಣ, ವರುಣ ಉಡುಪ ಇತರರು ರಾವಣಾವಸಾನ ಯಕ್ಷಗಾನದ ವಿವಿಧ ಪಾತ್ರಾಭಿನಯ, ಮಾತುಗಾರಿಕೆ ಕಲಿಯುತ್ತಿದ್ದಾರೆ.
ಕೇವಲ ವಿಡಿಯೋಕಾಲ್ ಅಥವಾ ಸಂಭಾಷಣೆ ಮೂಲಕ ಯಕ್ಷಗಾನ ಕಲಿಕೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಏ.25 ರಂದೇ ಕ್ಯಾಲಿಫೋರ್ನಿಯಾಕ್ಕೆ ತೆರಳಿ ಐದು ದಿನಗಳ ಕಾಲ ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವೇದಿಕೆಗೆ ಅಣಿಗೊಳಿಸಲಿದ್ದಾರೆ. ವೇದಿಕೆ ಪ್ರದರ್ಶನ ಮುಗಿದ ಬಳಿಕವೂ ಹತ್ತು ದಿನಗಳ ಕಾಲ ಅಲ್ಲಿಯೇ ಇದ್ದು ತರಬೇತಿ ನೀಡಲಿದ್ದಾರೆ ಸುಮಾ ಗಡಿಗೆಹೊಳೆ.