ಶಿರಸಿ: ವೇದಾಧ್ಯಯನ ಮಾಡಿದರೆ ಐಎಎಸ್, ಐಪಿಎಸ್ ಓದಲೂ ನೆರವಾಗುತ್ತದೆ ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.
ಶುಕ್ರವಾರ ಅವರು ಕೊಳಗೀಬೀಸ್ ಮಾರುತಿ ಮಂದಿರದಲ್ಲಿ ನಡೆಸಲಾಗುತ್ತಿರುವ ವೇದ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ವೇದ ಅಧ್ಯಯನ ಮಾಡಿದರೆ ಗೌರವ ಇಲ್ಲ ಭಾವನೆ ಇಂದು ಇಲ್ಲ. ವೇದ ಓದಿದವರಿಗೆ ಎಲ್ಲಿಲ್ಲದ ಗೌರವ ಇದೆ. ದೇವರ ಪೂಜಾ ಮಂತ್ರದಿಂದ ಹಿಡಿದು ಎಲ್ಲವನ್ನೂ ಕಲಿತರೆ ಸಮಾಜದಲ್ಲೂ ಗೌರವ ಹಾಗೂ ಉದ್ಯೋಗವೂ ಆಗುತ್ತದೆ ಎಂದರು.
ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಮಕ್ಕಳು ವೇದ ಅಧ್ಯಯನ ಶಿಬಿರಕ್ಕೆ ಆಗಮಿಸಿದ್ದು ಖುಷಿಯಾಗುತ್ತಿದೆ ಎಂದ ಅವರು, ದೇಶದ ಪ್ರಧಾನ ಮಂತ್ರಿಗಳೂ ಕೂಡ ವೇದಕ್ಕೆ ತಲೆ ಬಾಗುತ್ತಾರೆ. ವೇದ ಅಧ್ಯಯನ ಮಾಡಿದರೆ ದೇಶದ ಎಲ್ಲಡೆ ಗೌರವ ಇದೆ. ಹುಟ್ಟಿನಿಂದ ಸಾವು, ಸಾವಿನ ಆಚೆಗೂ ವೈದಿಕರು ಕರ್ಮಾಚರಣೆ ಮಾಡಲು ಬೇಕು ಎಂದ ಹೆಬ್ಬಾರ್, ಯಾರೇ ಯಾವುದೇ ಹುದ್ದೆಗೆ ದೊಡ್ಡವರಾದ ಬಳಿಕ ಹೋದರೂ ಬಡವರಿಗೆ, ದೇವಾಲಯಗಳಿಗೆ, ಸಾಮಾಜಿಕ ಮಹತ್ವದ ಸಂಗತಿಗಳಿಗೆ ನಮ್ಮದೇ ಆದ ಕೊಡುಗೆ ನೀಡಬೇಕು. ಅಂಥ ಗುಣವನ್ನು ಬೆಳಸಿಕೊಳ್ಳಬೇಕು ಎಂದೂ ಕಿವಿಮಾತು ಹೇಳಿದರು.
ಈ ವೇಳೆ ಪ್ರಮುಖರಾದ ಕಿರಣ ಚಿತ್ರಕಾರ, ಅನಿಲ್ ದೇವನಳ್ಳಿ, ನಾಗರಾಜ ಶೆಟ್ಟಿ, ಶ್ರೀಧರ ಹೆಗಡೆ ಇಳ್ಳುಮನೆ, ವಿ.ಆರ್.ಭಟ್ಟ ಟೊಣ್ಣೆಮನೆ, ಉಮಾಪತಿ ಹೆಗಡೆ ಇಳ್ಳುಮನೆ, ತಾ.ಪಂ.ಮಾಜಿ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ಮನಳ್ಳಿ, ಶ್ರೀಧರ ಭಟ್ಟ ಕೊಳಗಿಬೀಸ್ ಇತರರು ಇದ್ದರು. ಕಳೆದ ಹತ್ತು ದಿನಗಳಿಂದ ಜಿಲ್ಲೆಯ ವಿವಿಧಡೆಯಿಂದ ವಿದ್ಯಾರ್ಥಿಗಳು ವೇದ ಕಲಿಕೆಗೆ ಆಗಮಿಸಿದ್ದು, ಇನ್ನೂ ಹತ್ತು ದಿನ ಶಿಬಿರ ನಡೆಯಲಿದೆ.