ಸಿದ್ದಾಪುರ: ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೂರಲ್ಲೇ ಕೆಲಸ ಪಡೆದು ಅಭಿವೃದ್ಧಿಯೆಡೆಗೆ ಸಾಗಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೆರವಾಗುತ್ತಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಶಾಂತ ರಾವ್ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ತಾಲೂಕಿನ ಮನಮನೆ ಗ್ರಾಮ ಪಂಚಾಯತ್‌ನಲ್ಲಿ ಅಮೃತ ಸರೋವರ ನಿರ್ಮಾಣದಡಿ ಕೆರೆ ಅಭಿವೃದ್ಧಿಪಡಿಸಲಾಗುತ್ತಿರುವ ಕಾಮಗಾರಿ ಸ್ಥಳದಲ್ಲಿ ‘ರೋಜಗಾರ್ ದಿನ’ ಆಚರಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ, ರಸ್ತೆ ಕಾಮಗಾರಿ, ಚರಂಡಿ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಹೀಗಾಗಿ ಮನಮನೆ ಗ್ರಾಮ ಪಂಚಾಯತ್ ನ ಮಳಲವಳ್ಳಿ ಗ್ರಾಮದಲ್ಲಿ ಐಗಳಕೊಪ್ಪದಲ್ಲಿ ಕೆರೆ ಅಭಿವೃದ್ಧಿ, ಹಂಚಿನಕೇರಿಯಲ್ಲಿ ಚರಂಡಿ ನಿರ್ಮಾಣ, ಹಾಗೂ ಕಚ್ಚಾ ರಸ್ತೆಗಳ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಆದ್ದರಿಂದ ಕೂಲಿಕಾರರು ತಾವು ಕೆಲಸಕ್ಕೆ ಬರುವುದರೊಂದಿಗೆ ತಮ್ಮ ಸುತ್ತಲಿನವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸಿಗುವ ಸೌಲಭ್ಯಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕು. ಜೊತೆಗೆ ನರೇಗಾದಡಿ ಉದ್ಯೋಗ ಪಡೆದು, ವೈಯಕ್ತಿಕ ಜೀವನ ಹಾಗೂ ಸಾಮುದಾಯಿಕ ಅಭಿವೃದ್ಧಿಗೆ ಮುಂದಾಗಲು ಕೂಲಿಕಾರರು ಸಹಕರಿಸಬೇಕಿದೆ ಎಂದರು. ನರೇಗಾದಡಿ 60 ವರ್ಷ ಮೇಲ್ಪಟ್ಟವರು, ವಿಕಲಚೇತನರು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ 50% ರಿಯಾಯಿತಿಯಲ್ಲಿ ಕೆಲಸ ನೀಡಿ ಪೂರ್ತಿ ಕೂಲಿ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಎಲ್ಲರೂ ಮುಂದಾಗಬೇಕಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಟರಾಜ್ ನಾಯ್ಕ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಗ್ರಾಮ ಪಂಚಾಯತ್ ಸಿಬ್ಬಂದಿ, ಮೇಟ್ಸ್ ಹಾಜರಿದ್ದರು.