ಕಾರವಾರ: ಭ್ರಷ್ಟಾಚಾರ, ಅಭಿವೃದ್ಧಿ ರಹಿತ ಆಡಳಿತ ಹಾಗೂ ಕಮಿಷನ್‌ಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಇಂಥ ಆರೋಪ ಇರುವವರನ್ನೇ ಬಿಜೆಪಿ ಈ ಬಾರಿಯೂ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಜಿಲ್ಲಾ ಸಂಯೋಜಕ ಭಾಸ್ಕರ್ ಪಟಗಾರ್ ಆಪಾದಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನೀಡುವ ಒಂದೊAದು ಮತ ಕೂಡ ಭ್ರಷ್ಟಾಚಾರ, ಅಭಿವೃದ್ಧಿ ರಹಿತ ಆಡಳಿತ ಹಾಗೂ ಕಮಿಷನ್ ದಂಧೆಗೆ ಬೆಂಬಲ ನೀಡಿದಂತೆ. ಈಗ ಬಿಜೆಪಿ ಆಯ್ಕೆ ಮಾಡಿರುವ ಎಲ್ಲಾ ಅಭ್ಯರ್ಥಿಗಳು ಇಂಥ ಆರೋಪಗಳನ್ನು ಹೊತ್ತಿಕೊಂಡಿರುವವರೇ ಎಂದು ಅವರು ಆರೋಪಿಸಿದರು.
ಕುಮಟಾ ಕ್ಷೇತ್ರದ ವ್ಯಾಪ್ತಿಯ ಮಂಜುಗುಣಿ ಸೇತುವೆ ಇನ್ನೂ ಪೂರ್ಣಗೊಂಡಿಲ್ಲ. ದ್ವೇಷದ ರಾಜಕಾರಣ ಮಾಡುವಲ್ಲಿ ಬಿಜೆಪಿ ಶಾಸಕರು ಎತ್ತಿದ ಕೈ. ಕುಮಟಾ ಶಾಸಕ ದಿನಕರ ಶೆಟ್ಟಿಯವರ ಭ್ರಷ್ಟಾಚಾರದ ವಿರುದ್ಧ ಮುಖ್ಯಮಂತ್ರಿಗಳವರೆಗೂ ದೂರು ಕೊಟ್ಟರೂ ಈ ಬಾರಿ ಮತ್ತವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಸ್ಪರ್ಧೆಗೆ ಇಳಿಸಿದೆ. ಶಿರಸಿ ಕ್ಷೇತ್ರದಲ್ಲೂ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಏನೂ ಅಭಿವೃದ್ಧಿ ಆಗಿಲ್ಲ. ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದರೂ ಯಲ್ಲಾಪುರದ ಶಿವರಾಮ ಹೆಬ್ಬಾರ್ ಅವರು ತಮ್ಮ ಸಕ್ಕರೆ ಕಾರ್ಖಾನೆಯನ್ನ ಪಕ್ಕದ ಜಿಲ್ಲೆಯಲ್ಲಿ ಮಾಡಿದ್ದಾರೆ. ಇವೆಲ್ಲವನ್ನೂ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಶಿರಸಿಯಲ್ಲಿ ಕಾಗೇರಿಯವರಿಂದ ಒಂದು ತೂಗು ಸೇತುವೆ ಮಾಡಿಕೊಡಲಾಗಿಲ್ಲ. ರಸ್ತೆಗೆ ಮಿಣಿಮಿಣಿ ಲೈಟ್ ಹಾಕಿದ್ದೇ ಅವರ ಸಾಧನೆ. ಭಟ್ಕಳ ಶಾಸಕರ ವಿರುದ್ಧ ಅವರ ಪಕ್ಷದವರೇ ಭ್ರಷ್ಟಾಚಾರ, ಕಮಿಷನ್ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಅಂಥವರನ್ನೇ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿ ಸ್ಪರ್ಧೆಗಿಳಿಸಿರುವುದು ದುರಂತ. ಬಿಜೆಪಿ ರಾಜ್ಯದಲ್ಲಿ 50- 60 ಸೀಟುಗಳನ್ನ ಮಾತ್ರ ಗೆಲ್ಲುತ್ತದೆ. ಕಮಲ ಕೆಸರಲ್ಲಿರಬೇಕು. ತೆನೆ ಹೊಲದಲ್ಲಿರಬೇಕು. ಕೈ ಕೆಲಸ ಮಾಡುತ್ತಿರಬೇಕು. ಬಿಜೆಪಿಯವರಿಗೆ ಅವರ ಅಭಿವೃದ್ಧಿಗಳಿಂದ ಮತ ಕೇಳಲು ಶಕ್ತಿ ಇಲ್ಲ. ಕೇವಲ ಮೋದಿ ಹೆಸರಲ್ಲಿ ಮತ ಕೇಳುತ್ತಾರೆ. ಭ್ರಷ್ಟಾಚಾರವಷ್ಟೇ ಅವರ ಸಾಧನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಂಕೋಲಾದ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯಕ, ಅರಗಾದ ಯುವ ಮುಖಂಡ ರಾಜೇಂದ್ರ ನಾಯ್ಕ, ಗೋಕರ್ಣ ನಾಗು ಹಳ್ಳೇರ್, ಶ್ರೀಕಾಂತ್ ಇದ್ದರು.