ಕಾರವಾರ: ಯುವ ಒಕ್ಕೂಟದ ರಾಘು ನಾಯ್ಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಇನ್ನಷ್ಟು ಬಲ ಬಂದಂತಾಗಿದೆ. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವುದಾಗಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು.
ಜಿಲ್ಲಾ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಭರವಸೆ ಜೊತೆಗೆ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪಿಸಲಾಗುವುದು. ಕಾಂಗ್ರೆಸ್ ಅಂದ್ರೆ ಬಡವರ ಪರವಾಗಿರುವ ಪಕ್ಷ. ಇದೇ ಕಾರಣಕ್ಕೆ ಗ್ಯಾರಂಟಿ ಕಾರ್ಡ್ ಮೂಲಕ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ಹಣ, 200 ವ್ಯಾಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ಪದವಿ ಪೂರೈಸಿದ ಮೊದಲ ಎರಡು ವಷÀð 3 ಸಾವಿರ ಮಾಸಿಕ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿದೆ. ಇದಕ್ಕೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹಿ ಕೂಡ ಇದ್ದು ಗ್ಯಾರಂಟಿಯಾಗಿ ನೀಡಲಿದ್ದಾರೆ. ಇದಲ್ಲದೆ ಗಡಿಭಾಗವಾದ ಜಿಲ್ಲೆಗೆ ವಿಶೇಷ ಅನುದಾನ, ಕುಮಟಾದಲ್ಲಿ ಕೈಗಾರಿಕೆ ನೀಡುವುದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಮಾತನಾಡಿ, ಕೈಗಾ, ಸೀಬರ್ಡ್ ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಾಜಿ ಶಾಸಕರು ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಯುವಕರು ಅವರ ಬೆನ್ನಿಗೆ ನಿಂತಿದ್ದೇವೆ. ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಯೋಜನೆಗಳು ಆಗುತ್ತಿರುವ ಕಾರಣ ಹೆಚ್ಚು ಉದ್ಯೋಗ ಸ್ಥಳೀಯರಿಗೆ ಸಿಗುವಂತಾಗಬೇಕು ಎಂದು ಹೇಳಿದರು.
ಬಳಿಕ ರಾಘು ನಾಯ್ಕ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿವೇಕ್ ಉಪಾಧ್ಯಾಯ, ಮಾಜಿ ಶಾಸಕ ಜೆ.ಡಿ.ನಾಯ್ಕ, ಕೆಪಿಸಿಸಿ ಸಂಯೋಜಕ ಭಾಸ್ಕರ್ ಪಟಗಾರ, ಸಮೀರ್ ನಾಯ್ಕ, ಗುರು, ಪ್ರಭಾಕರ್ ಮಾಳಸೇಕರ್, ಜನಾರ್ಧನ ಸೇರಿದಂತೆ ಇನ್ನಿತರರು ಇದ್ದರು.