ಭಟ್ಕಳ: ರಂಜಾನ್ ಮಾರ್ಕೆಟ್‌ನಲ್ಲಿ ಮಹಿಳೆಯನ್ನು ಮುಟ್ಟಿದ ವಿಚಾರಕ್ಕೆ ಗಲಾಟೆ ನಡೆದ ವೇಳೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುವ ವೇಳೆ ಜೀಪ್ ಅಡ್ಡಗಟ್ಟಿ ಕಲ್ಲೆಸೆದು ಗಾಜು ಒಡೆದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಲೂಕಿನ ಹದ್ಲೂರ್ ನಿವಾಸಿ ಚಂದ್ರು ಗೊಂಡ, ಸುಲ್ತಾನ್ ಸ್ಟ್ರೀಟ್‌ನ ಮೊಹ್ಮದ್ ಮೀರಾ, ಸರ್ಪನಕಟ್ಟೆಯ ರವೀಂದ್ರ ನಾಯ್ಕ, ಗುಳ್ಮೆಯ ಇಸ್ಮಾಯಿಲ್ ನೂರಾನಿ, ಸೈಯದ್ ಸಲೀಂ, ಮಹ್ಮಧ ಫೈಜಾನ್ ಹಾಗೂ ಮೊಹಮ್ಮದ್ ಸದ್ದಾಂ ಬಂಧಿತರು. ರಂಜಾನ್ ಮಾರ್ಕೆಟ್‌ನಲ್ಲಿ ಮಹಿಳೆಯನ್ನು ಮುಟ್ಟಿದ ವಿಷಯವಾಗಿ ಇಲ್ಲಿನ ಮುಖ್ಯ ರಸ್ತೆಯ ಮುಸ್ಬಾ ಕ್ರಾಸ್ ಸಮೀಪ ಅಪೋಲೋ ಫಾರ್ಮಸಿ ಎದುರಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ ವೇಳೆ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೇಳಲು ಹೋದಾಗ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತಾ, ಏರು ಧ್ವನಿಯಲ್ಲಿ ರಂಪಾಟ ಮಾಡಲು ಪ್ರಾರಂಭಿಸಿದ್ದಾರೆ.
ಆ ಸಂದರ್ಭದಲ್ಲಿ ಆರೋಪಿ ಚಂದ್ರ ಗೊಂಡ ಮತ್ತು ಮೊಹಮ್ಮದ್ ಮೀರಾ ಇವರನ್ನು ವಶಕ್ಕೆ ಪಡೆದು ಸ್ಥಳಕ್ಕೆ ಬಂದ ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗುವ ವೇಳೆ ಅಲ್ಲಿದ್ದ ಇನ್ನುಳಿದ ಆರೋಪಿತರು ಪೊಲೀಸ್ ಜೀಪ್‌ನ್ನು ಅಡ್ಡಗಟ್ಟಿ, ಜೀಪ್ ಮುಂದಕ್ಕೆ ಹೋಗದಂತೆ ಅಡೆತಡೆ ಉಂಟು ಮಾಡಿ ಪೊಲೀಸ್ ಜೀಪಿನ ಗಾಜನ್ನು ಕಲ್ಲಿನಿಂದ ಹೊಡೆದು ಹಾನಿ ಮಾಡಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನು ಉಂಟು ಮಾಡಿದ್ದಲ್ಲದೇ ಆರೋಪಿ ಮೊಹಮ್ಮದ್ ಮೀರಾ ಪೊಲೀಸ್ ಸಿಬ್ಬಂದಿ ಗೌತಮ್ ಅವರ ಬಲ ಕೈಬೆರಳುಗಳನ್ನು ತಿರುವಿ ನೋವುಪಡಿಸಿದ್ದರಿಂದ ಆರೋಪಿತರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ ಜೀಪಿನ ಎದುರಿನ ಗಾಜು ಒಡೆದು ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಶುಕ್ರವಾರದಂದು ಮುಂಜಾನೆ ವಶಕ್ಕೆ ಪಡೆದುಕೊಂಡಿದ್ದು, ಒಟ್ಟು ಪ್ರಕರಣದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಎಎಸ್‌ಪಿ ಸಿ.ಟಿ.ಜಯಕುಮಾರ್ ಭೇಟಿ ನೀಡಿದ್ದು, ಸದ್ಯ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂಧಿತರಿಗೆ ಮೇ 4ರವರೆಗೆ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.