ಕಾರವಾರ: ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷವೇ ಭರವಸೆಯಾಗಿದೆ ಎಂದು ಶಾಸಕಿ ಹಾಗೂ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಶುಕ್ರವಾರ ಅವರು ಕಾರವಾರ ನಗರಸಭೆ ವ್ಯಾಪ್ತಿಯ ದೇವತಿಶಿಟ್ಟಾ, ಹರಿದೇವನಗರ ವಾರ್ಡ್ 3 ಮತ್ತು 10ರಲ್ಲಿ ಮತಯಾಚಿಸಿ ಮಾತನಾಡಿದರು. ನಮ್ಮ ಸರಕಾರದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ನಗರಗಳ ಅಭಿವೃದ್ಧಿ ಕೇವಲ ನಮ್ಮ ಸರಕಾರದ ಅವಧಿಯಲ್ಲಿಯೇ ಮಾತ್ರ ಸಾಧ್ಯವಾಗಿದೆ. ನಾನೂ ಕೂಡ ನಮ್ಮ ನಗರದ ಬೆಳವಣಿಗೆಗೆ ಸರ್ಕಾರದಿಂದ ಬೇಕಾದ ಅನುದಾನವನ್ನು ತಂದು ಹತ್ತು ಹಲವು ಕಾರ್ಯಗಳನ್ನು ಮಾಡಿದ್ದೇನೆ. ಕೋಣೆನಾಲ ಅಭಿವೃದ್ಧಿಗೆ 4.5 ಕೋಟಿ ಅನುದಾನ, ಮಾಲಾದೇವಿ ಮೈದಾನ ಅಭಿವೃದ್ಧಿ, ಶಾಸಕರ ಶಾಲೆ, ಗ್ಯಾಸ್ ಕಾಲೇಜು, ಮಹಿಳಾ ಕಾಲೇಜು ನಿರ್ಮಾಣಕ್ಕೆ ಅನುದಾನವನ್ನು ತಂದಿದ್ದೇನೆ. ನಮ್ಮ ಮಕ್ಕಳಿಗೆ ಇಲ್ಲಿಯೇ ಎಲ್ಲ ರೀತಿಯ ಶಿಕ್ಷಣದ ವ್ಯವಸ್ಥೆ ಮಾಡಲು ಶ್ರಮಿಸಿದ್ದೇನೆ ಎಂದರು.
ಈಗಾಗಲೇ ವಾರ್ಡ್ ಗಳಲ್ಲಿ ವಿವಿಧ ರಸ್ತೆ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಾರ್ಡ್ ಗಳಲ್ಲಿ ಇರುವ ಸಮಸ್ಯೆ ನಿವಾರಣೆಗೆ ಸಾಕಷ್ಟು ಪ್ರಯತ್ನಿಸಿದ್ದೇನೆ. ಬಾಕಿ ಉಳಿದಿರುವ ಕಾರ್ಯವನ್ನು ಪೂರ್ಣ ಮಾಡುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದರು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಸ್ಥಾನಮಾನ, ಗೌರವವನ್ನು ವಿಶ್ವದೆಲ್ಲೆಡೆ ಹೆಚ್ಚಿಸಿದ್ದಾರೆ. ನಮ್ಮ ಸರಕಾರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜಿಸಿದೆ. ಈ ಕಾರ್ಯಕ್ರಮಗಳ ಅಭಿವೃದ್ಧಿ ಕಾರ್ಯಗಳ ಸಾಕಾರಕ್ಕೆ ಮತಯಾಚನೆ ಮಾಡಿದರು.
ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ ಮಾತನಾಡಿ, ವಿಶ್ವದೆಲ್ಲೆಡೆ ದೇಶದ ಘನತೆ ಹೆಚ್ಚಿದೆ. ದೇಶ ಹಾಗೂ ರಾಜ್ಯದ ಮೂಲೆ ಮೂಲೆಯಲ್ಲೂ ಭಾರತೀಯ ಜನತಾ ಪಕ್ಷ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲೂ ಶಾಸಕಿ ರೂಪಾಲಿ ನಾಯ್ಕ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಒಬ್ಬ ಮಹಿಳೆ ಹೇಗೆ ಒಂದು ಮನೆ ನಿರ್ವಹಣೆ ಮಾಡುತ್ತಾರೋ ಅದೇ ರೀತಿ ಶಾಸಕಿಯಾಗಿ ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ. ಅವರಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದರು.
ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರಾಜೇಂದ್ರ ನಾಯ್ಕ ಹಾಗೂ ಕಾರವಾರ ನಗರಸಭೆ ಅಧ್ಯಕ್ಷರಾದ ನಿತಿನ ಪಿಕಳೆ ಮಾತನಾಡಿ ಮತ್ತೊಮ್ಮೆ ರೂಪಾಲಿ ನಾಯ್ಕರ ಪರ ಮತಯಾಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಸೇರಿದ್ದ ಮಹಿಳೆಯರು ಹಸ್ತಲಾಘವ ನೀಡಿ ಮತ್ತೊಮ್ಮೆ ರೂಪಾಲಿ ನಾಯ್ಕರವರಿಗೆ ಅವಕಾಶ ನೀಡಿ ಕಾರವಾರ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರವಾರ ನಗರಾಧ್ಯಕ್ಷರಾದ ನಾಗೇಶ ಕುರಡೇಕರ, ನಗರಸಭಾ ಉಪಾಧ್ಯಕ್ಷರಾದ ಪಿ.ಪಿ.ನಾಯ್ಕ, ಸದಸ್ಯರಾದ ನಂದಾ ಸಾವಂತ, ಶಿಲ್ಪಾ ನಾಯ್ಕ, ಉಲ್ಲಾಸ ಕೇಣಿ, ಹನುಮಂತ ತಳವಾರ, ರವಿರಾಜ ನಾಯ್ಕ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ, ಬೂತ್ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.