ಯಲ್ಲಾಪುರ: ಚುನಾವಣಾ ಅಖಾಡದಲ್ಲಿರುವ ಕೋಟಿ ಕೋಟಿವೀರರ ನಡುವೆ ಬ್ಯಾಂಕ್ ಖಾತೆಯನ್ನು ಹೊಂದಿರದ ಫಕೀರನೊಬ್ಬ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಆಯ್ಕೆ ಬಯಸಿ ಉಮೇದುದಾರಿಕೆ ಸಲ್ಲಿಸಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್.ಪಾಟೀಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ವಿರುದ್ಧ ಈ ಹಿಂದೆ ಚುನಾವಣೆಗೆ ಸ್ಫರ್ಧಿಸಿ ಸೋಲು ಕಂಡಿದ್ದ ಮುಂಡಗೋಡದ ಚಿದಾನಂದ ಹರಿಜನ್ 2023ರ ವಿಧಾನಸಭೆ ಚುನಾವಣೆಗೆ ಸಹ ಸ್ಪರ್ಧಿಸಿದ್ದಾರೆ. ಪತ್ನಿಯ ಬಳಿ ಇರುವ ಚಿನ್ನದ ತಾಳಿ, ಹಂಚಿನ ಮನೆ, ಓಡಾಡುವ ಬೈಕ್ ಹಾಗೂ ಓಮಿನಿ ಸೇರಿ 10 ಲಕ್ಷ ರೂ ಮೌಲ್ಯದ ಆಸ್ತಿ ಹೊಂದಿದ ಚಿದಾನಂದ ಹರಿಜನ್ ಅವರಿಗೆ ಪತ್ನಿ ಹೆಸರಿನಲ್ಲಿ ಸಂಘ, ಸೊಸೈಟಿ, ಕೈಗಡ ಸೇರಿ 1.70 ಲಕ್ಷ ರೂ ಸಾಲವೂ ಇದೆ!
3ನೇ ತರಗತಿಯವರೆಗೆ ಓದಿರುವ ಚಿದಾನಂದ ಹರಿಜನ್ ಮೂರು ದಶಕದ ಹಿಂದೆ ಮುಂಡಗೋಡ ಪಟ್ಟಣ ಪಂಚಾಯತಕ್ಕೆ ಸಂಯುಕ್ತ ಜನತಾದಳದಿಂದ ಅವರು ಸ್ಪರ್ಧಿಸಿದ್ದರು. ಆ ಪಕ್ಷ ಬಿಜೆಪಿ ಬೆಂಬಲ ಪಡೆದಿದ್ದರಿಂದ ಹಲವು ನಾಯಕರು ಆಗಮಿಸಿ ಅವರ ಪರ ಪ್ರಚಾರ ನಡೆಸಿದ್ದರು. ಆದರೆ, ಆಗ 92 ಮತಗಳನ್ನು ಪಡೆದು ಅವರು ಸೋತರು. ಯಲ್ಲಾಪುರ ವಿಧಾನಸಭಾ ಕ್ಷೇತ್ರ ರಚನೆಯಾದ ನಂತರ 2008ರಲ್ಲಿ ವಿ ಎಸ್ ಪಾಟೀಲ್ ಹಾಗೂ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಚುನಾವಣೆಗೆ ನಿಂತರು. ಆಗ, ವಿ ಎಸ್ ಪಾಟೀಲ್ ಶಾಸಕರಾಗಿದ್ದು, ಇವರು 367 ಮತಗಳನ್ನು ಪಡೆದಿದ್ದರು. ಅದಾದ ನಂತರ 2013ರಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದರು. ಆಗ ಶಿವರಾಮ ಹೆಬ್ಬಾರ್ ಗೆದ್ದರು.
ಅದಾದ ಮೇಲೆ ಅನಂತಕುಮಾರ ಹೆಗಡೆ ವಿರುದ್ಧ ಲೋಕಸಭಾ ಚುನಾವಣೆ ಎದುರಿಸಲು ಕರ್ನಾಟಕ ರಾಜ್ಯ ಅನ್ನದಾತ ರೈತಸಂಘದಿಂದ ಚಿದಾನಂದ ಅವರು ನಾಮಪತ್ರ ಸಲ್ಲಿಸಿದರು. ಆಗ ಸಾವಿರ ಸಂಖ್ಯೆಯ ಮತಗಳು ಇವರ ಪಾಲಾದವು. 2018ರ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಅವರಿಗೆ ಬೆಂಬಲ ನೀಡಿ, ನಂತರ ನಡೆದ ಉಪಚುನಾವಣೆಯಲ್ಲಿ ಮತ್ತೆ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ 413 ಮತಗಳನ್ನು ಪಡೆದರು. ಇಷ್ಟಾದರೂ ಬಿಡದೇ ಇದೀಗ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅವರು ಚುನಾವಣಾಧಿಕಾರಿಗಳಿಗೆ ನೀಡಲು ಬ್ಯಾಂಕ್ ಖಾತೆ ತೆರೆಯುವುದಕ್ಕಾಗಿ ಓಡಾಟ ನಡೆಸುತ್ತಿದ್ದಾರೆ. ಎಲ್ಲಾ ಚುನಾವಣೆಗಳಲ್ಲಿಯೂ ಅವರು ತಮ್ಮ ವಾಹನದಲ್ಲಿ ಆಗಮಿಸಿ, ಒಂಟಿಯಾಗಿ ಪ್ರಚಾರ ನಡೆಸುತ್ತಾರೆ. ಕೈಯಲ್ಲಿರುವ 40 ಸಾವಿರ ರೂ. ಹಣದಲ್ಲಿಯೇ ಈ ಚುನಾವಣೆ ಎದುರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.