ಮುಂಡಗೋಡ: ಪಟ್ಟಣದ ಪ್ರಮುಖ ಹೆದ್ದಾರಿಗಳಾದ ಶಿರಸಿ- ಹುಬ್ಬಳ್ಳಿ ಮತ್ತು ಯಲ್ಲಾಪುರ- ಬಂಕಾಪುರ ರಸ್ತೆಗಳನ್ನು ಜನರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ದುರಸ್ತಿ ಪಡಿಸಿಕೊಡಬೇಕು ಎಂದು ಪಟ್ಟಣ ಪಂಚಾಯತ ಸದಸ್ಯ ಫಣಿರಾಜ ಹದಳಗಿ ಅವರು ಲೋಕೋಪಯೋಗಿ ಮತ್ತು ಬಂದರು ಒಳನಾಡು ಸಾರಿಗೆ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಎರಡು ರಸ್ತೆಗಳು ತಮ್ಮ ಇಲಾಖೆಯ ಅಧೀನಕ್ಕೆ ಒಳಪಟ್ಟಿದ್ದು, ಅಲಂಕಾರಿಕ ವಿದ್ಯುತ್ ದೀಪ ಅಳವಡಿಸಲು ಎರಡೂ ಬದಿಗಳಲ್ಲಿ ರಸ್ತೆಗಳನ್ನು ಅಗೆದು ಜನರ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡಲಾಗಿದೆ. ಇದರ ನಿರ್ವಹಣೆಯ ಜವಾಬ್ದಾರಿ ತಮ್ಮದೇ ಆಗಿದೆ. ಕಳೆದ 2- 3 ತಿಂಗಳಿಂದ ರಸ್ತೆಗಳ ಬದಿಯಲ್ಲಿ ಸಣ್ಣ ಸಣ್ಣ ರಾಶಿಗಳಾಗಿ ಮಣ್ಣುಗಳು ಸಂಗ್ರಹಗೊಂಡಿದ್ದು ಪಾದಚಾರಿಗಳು ಮತ್ತು ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಭೀತಿಯಿಂದ ಓಡಾಡುವಂತಾಗಿದ್ದು, ದಿನನಿತ್ಯ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ತಕ್ಷಣ ಎರಡೂ ರಸ್ತೆಗಳನ್ನು ದುರಸ್ತಿ ಮಾಡಿ ಜನರ ಮತ್ತು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ. ಒಂದಾನುವೇಳೆ ರಸ್ತೆ ದುರಸ್ತಿ ಮಾಡುವಲ್ಲಿ ವಿಳಂಬವಾದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಇನ್ನು 10 ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ. ಜನರ ಪ್ರತಿಭಟನೆಗೆ ಅವಕಾಶ ನೀಡದೆ ತಕ್ಷಣವೆ ರಸ್ತೆ ದುರಸ್ತಿ ಮಾಡುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.