ಕುಮಟಾ: ಇಲ್ಲಿನ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಶಿವಾನಂದ ಹೆಗಡೆ ಅವರ ಸಂಪೂರ್ಣ ಬೆಂಬಲದೊಂದಿಗೆ ಇನ್ನೊಮ್ಮೆ ನಾಮಪತ್ರ ಸಲ್ಲಿಸಿದರು.
ಜಿಲ್ಲೆಯಲ್ಲಿಯೇ ಹೈವೊಲ್ಟೇಜ್ ಕ್ಷೇತ್ರವಾದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂಡಾಯವೇ ದೊಡ್ಡ ತಲೆ ನೋವಾಗಿ ಪರಿಣಮಿಸಲಿದೆ. ಕ್ಷೇತ್ರದಲ್ಲಿ 14 ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಕಿ 12 ಆಕಾಂಕ್ಷಿಗಳು ಈಗಾಗಲೇ ಪಕ್ಷದ ಹೈಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ನಿವೇದಿತ್ ಆಳ್ವಾರಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಅವರು ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸುವುದಾಗಿ ತಿಳಿಸಿದ್ದರು. ಏ.17ರಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಕಹಳೆ ಊದಿದ್ದರು. ಅದರಂತೆ ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಶಿವಾನಂದ ಹೆಗಡೆ ಅವರು ಏ.20ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದರು.
ಅಷ್ಟರಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತು ಶಿವಾನಂದ ಹೆಗಡೆ ನಡುವೆ ಮಾತುಕತೆ ಏರ್ಪಟ್ಟು, ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ನಿಲ್ಲಬೇಕೆಂಬ ನಿರ್ಣಯಕ್ಕೆ ಬರಲಾಗಿದೆ. ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದರಿಂದ ಶಿವಾನಂದ ಹೆಗಡೆ ಅವರು ಮಾಜಿ ಶಾಸಕರಿಗೆ ಸಂಪೂರ್ಣ ಬೆಂಬಲ ನೀಡುವ ವಾಗ್ದಾನ ಮಾಡುವ ಜೊತೆಗೆ ನಾನೇ ಸ್ವತಃ ನಿಮ್ಮ ಜೊತೆಗೆ ನಿಂತು ಸ್ವಾಭಿಮಾನಿ ಕಾರ್ಯಕರ್ತರ ಬೆಂಬಲದೊಂದಿಗೆ ಚುನಾವಣೆ ಎದುರಿಸೋಣ. ಈ ಕ್ಷೇತ್ರದಲ್ಲಿ ಮತ್ತೊಮ್ಮೆ ನಿಮ್ಮನ್ನು ಗೆಲ್ಲಿಸಲು ನಾವೆಲ್ಲ ಶಕ್ತಿಮೀರಿ ಪ್ರಯತ್ನಿಸುವುದಾಗಿ ಶಿವಾನಂದ ಹೆಗಡೆ ಅವರು ಮಾಜಿ ಶಾಸಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಶಿವಾನಂದ ಹೆಗಡೆ ಅವರ ಜೊತೆಗೂಡಿ ಇನ್ನೊಮ್ಮೆ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟುವಂತೆ ಮಾಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಳೆದ 25 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ದುಡಿದಿದ್ದೇವೆ. ಈ ಬಾರಿ ನಮ್ಮ ಕ್ಷೇತ್ರದಿಂದ 14 ಮಂದಿ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರು. ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ನಾನು ಅದಕ್ಕೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ಹೈಕಮಾಂಡ್ ಪಕ್ಷಕ್ಕಾಗಿ ಕ್ಷೇತ್ರದಲ್ಲಿ ದುಡಿದವರನ್ನು ಕಡೆಗಣಿಸಿ, ಹೊರಗಿನವರಿಗೆ ಟಿಕೆಟ್ ಘೋಷಿಸುವ ಮೂಲಕ ನಮಗೆ ಅನ್ಯಾಯ ಮಾಡಿದ್ದಾರೆ. ನಮಗಾದ ಅನ್ಯಾಯಕ್ಕಾಗಿ ಸ್ವಾಭಿಮಾನದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ. ನನಗೆ ಶಿವಾನಂದ ಹೆಗಡೆ ಅವರು ಸಾಥ್ ನೀಡಿರುವುದರಿಂದ ಇನ್ನಷ್ಟು ಬಲ ಬಂದಂತಾಗಿದೆ. ಮತದಾರರು ಮತ್ತೊಮ್ಮೆ ನನ್ನನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ನಾನು ಕೂಡ ಕಾಂಗ್ರೆಸ್‌ನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಪಕ್ಷನಿಷ್ಠೆಯನ್ನು ಗುರುತಿಸಿ ಈ ಬಾರಿಗೆ ನನಗೆ ಟಿಕೆಟ್ ನೀಡುವ ನಿರೀಕ್ಷೆಯಲ್ಲಿದೆ. ಆದರೆ ಸ್ಥಳೀಯರನ್ನು ಕಡೆಗಣಿಸಿ, ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ತೀವ್ರ ಬೇಸರಗೊಂಡ ನಾನು ಜಿಲ್ಲಾ ಕಿಸಾನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಅಲ್ಲದೇ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ಈ ಬಾರಿ ಬಂಡಾಯವಾಗಿ ಸ್ಪರ್ಧೆ ಮಾಡಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಎಲ್.ನಾಯ್ಕ, ರವಿಕುಮಾರ ಶೆಟ್ಟಿ, ದಿಲೀಪ್ ಶೆಟ್ಟಿ, ಮಧುಸೂಧನ ಶೇಟ್, ಸುರೇಖಾ ವಾರೇಕರ್, ಅನಿತಾ ಮಾಪಾರಿ, ತಾರಾ ಗೌಡ, ಜಗದೀಶ ಹರಿಕಂತ್ರ, ಅಮರ ಶೆಟ್ಟಿ, ಮಂಜುನಾಥ ಹರಿಕಂತ್ರ, ಕೃಷ್ಣಾನಂದ ವೆರ್ಣೇಕರ್, ಗೀತಾ ನಾಯ್ಕ, ವೀಣಾ ನಾಯಕ, ರಾಜೇಶ ನಾಯ್ಕ ಸೇರಿದಂತೆ ನೂರಕ್ಕೂ ಅಧಿಕ ಬೆಂಬಲಿಗರು ಇದ್ದರು.