ಮಂಗಳೂರು: ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ ಗುರುವಾರ ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ರಂಜಾನ್ ಉಪವಾಸ ಅಂತ್ಯವಾಗಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ರಂಜಾನ್ ಹಬ್ಬ ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಜಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ೧ ತಿಂಗಳ ಕಾಲ ಆಚರಿಸುವ ರಂಜಾನ್ ಉಪವಾಸ ವ್ರತ ನಾಳೆ ಅಂತ್ಯವಾಗಲಿದೆ. ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ, ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬ ಆಚರಿಸುತ್ತಾರೆ.
ರಂಜಾನ್ ತಿಂಗಳ ಉಪವಾಸ ಕೊನೆಗೊಂಡ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಧರ್ಮದಲ್ಲಿ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಕೂಡಾ ಒಂದು. ಈ ದಿನದಂದು ಮುಸ್ಲಿಮರು ತಮ್ಮ ಉಪವಾಸ(ರೋಜಾ)ವನ್ನು ಕೊನೆಗೊಳಿಸುತ್ತಾರೆ. ರಂಜಾನ್ ಸಮಯದಲ್ಲಿ ಅವರಿಗೆ ಆರೋಗ್ಯ ಮತ್ತು ಪ್ರತಿರೋಧಕವನ್ನು ನೀಡಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ, ದಾನ ಮಾಡುತ್ತಾರೆ, ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯುತ್ತಾರೆ.
ಈದ್-ಉಲ್-ಫಿತಾರ್ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ಅಮಾವಾಸ್ಯೆಯ ದರ್ಶನದ ನಂತರ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಅನುಗುಣವಾಗಿ ಚಂದ್ರನ ಹಿಜ್ರಿ ತಿಂಗಳ ಆರಂಭವು ಧಾರ್ಮಿಕ ವ್ಯವಸ್ಥೆಗಳು ಅಂದರೆ ಕಾಲನುಕ್ರಮದಲ್ಲಿ ಬದಲಾವಣೆಯು ಅಮವಾಸ್ಯೆಯ ವೀಕ್ಷಣೆಗೆ ಅನುಗುಣವಾಗಿ ಬದಲಾಗುವುದರಿಂದ ಈದ್-ಉಲ್-ಫಿತರ್ ವಿವಿಧ ಪ್ರದೇಶಗಳಲ್ಲಿ ವಿವಿಧ ದಿನಗಳಲ್ಲಿ ಬರುತ್ತದೆ.
ಈ ವರ್ಷ ಈದ್-ಉಲ್-ಫಿತಾರ್ ನ್ನು ಏಪ್ರಿಲ್ ೨೧ ಶುಕ್ರವಾರದಿಂದ ಏಪ್ರಿಲ್ ೨೩ ಭಾನುವಾರದವರೆಗೆ ಆಚರಿಸಲಾಗುತ್ತದೆ ಎಂದು ಹೇಳಲಾಗಿದ್ದು, ಚಂದ್ರನ ವೀಕ್ಷಣೆಗೆ ಅನುಗುಣವಾಗಿ ನಿಜವಾದ ದಿನಾಂಕ ಬದಲಾವಣೆಯಾಗಿದೆ.