Slide
Slide
Slide
previous arrow
next arrow

ಶೂಟೌಟ್ ಪ್ರಕರಣ; ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್ ವಿರುದ್ಧ ಪ್ರಕರಣ ರದ್ದು

300x250 AD

ಬೆಂಗಳೂರು: ರಾಘವೇಶ್ವರ ಶ್ರೀ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಪುತ್ತೂರಿನಲ್ಲಿ ರಾಮಚಂದ್ರಾಪುರ ಮಠದ ಭಕ್ತನೆನ್ನಲಾದ ಬಂಟ್ವಾಳ ಸಮೀಪದ ಕೆದಿಲ ನಿವಾಸಿ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಶ್ರೀ ಹಾಗೂ ಆರ್.ಎಸ್.ಎಸ್. ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ದದ ಆರೋಪಗಳನ್ನು ಹೈಕೋರ್ಟ್ ರದ್ದುಪಡಿಸಿದೆ.
ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಘವೇಶ್ವರ ಶ್ರೀಗಳ ವಿರುದ್ದ ಹಲವು ಪ್ರಕರಣಗಳು ಮುನ್ನಲೆಗೆ ಬಂದ ಸಂದರ್ಭದಲ್ಲೇ ರಾಮಚಂದ್ರಾಪುರ ಮಠದ ಭಕ್ತ ಎನ್ನಲಾಗಿದ್ದ ಶ್ಯಾಮಪ್ರಸಾದ್ ಶಾಸ್ತ್ರಿ ಎಂಬವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ೨೦೧೪ರ ಆಗಸ್ಟ್ ೩೧ರಂದು ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಾಮಚಂದ್ರಾಪುರ ಮಠದವರ ಬೆದರಿಕೆಗಳೇ ಈ ಘಟನೆಗೆ ಕಾರಣ ಎಂದು ಮೃತರ ಪತ್ನಿ ದೂರಿದ್ದರು. ಈ ಪ್ರಕರಣದಲ್ಲಿ ರಾಘವೇಶ್ವರ ಶ್ರೀ, ಉದ್ಯಮಿ ಬೋನಂತಾಯ ಶಿವಶಂಕರ ಭಟ್, ಹಾಗೂ ಆರೆಸ್ಸೆಸ್ ನಾಯಕ ಪ್ರಭಾಕರ ಭಟ್ ಅವರನ್ನು ಆರೋಪಿಗಳೆಂದು ಪರಿಗಣಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಗಂಭೀರ ಪ್ರಕರಣದಲ್ಲಿ ಆರೆಸ್ಸೆಸ್ ನಾಯಕ ಪ್ರಭಾಕರ ಭಟ್ ಪರವಾಗಿ ಹಿರಿಯ ವಕೀಲ ಪಿ.ಪಿ.ಹೆಗ್ಡೆ ಹೈಕೋರ್ಟ್ ನಲ್ಲಿ ಈ ಚಾರ್ಜ್ ಶೀಟ್ ನ್ನು ಪ್ರಶ್ನಿಸಿದರು. ಅದೇ ಹೊತ್ತಿಗೆ ರಾಘವೇಶ್ವರ ಶ್ರೀಗಳೂ ತಮ್ಮ ವಿರುದ್ದ ಆಧಾರ ರಹಿತ ಆರೋಪ ಹೊರಿಸಲಾಗಿದೆ ಎಂದು ಕೋರ್ಟ್ನ ಗಮನಸೆಳೆದರು.
ಹೈಕೋರ್ಟ್ ನಲ್ಲಿಂದು ಈ ಅರ್ಜಿ ಕುರಿತಂತೆ ನಡೆದ ವಿಚಾರಣೆ ಕುತೂಹಲದ ಕೇಂದ್ರಬಿಂದುವಾಯಿತು. ಡಾ.ಪ್ರಭಾಕರ ಭಟ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಪಿ.ಪಿ.ಹೆಗ್ಡೆ, ಈ ಪ್ರಕರಣದಲ್ಲಿ ಗಣ್ಯರ ವಿರುದ್ದ ದುರುದ್ದೇಶದಿಂದ ಪ್ರಚೋದನೆಯ ಸುಳ್ಳು ಆರೋಪ ಹೊರಿಸಲಾಗಿದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಸಿಐಡಿ ಪೊಲೀಸರು ದೋಷಾರೋಪ ಹೊರಿಸಿದ್ದಾರೆ ಎಂದು ನ್ಯಾಯಪೀಠದ ಗಮನಸೆಳೆದರು. ವಾದವನ್ನು ಆಲಿಸಿದ ಹೈಕೋರ್ಟ್ ಪೀಠ, ರಾಘವೇಶ್ವರ ಶ್ರೀಗಳ ಹಾಗೂ ಡಾ.ಪ್ರಭಾಕರ ಭಟ್ ವಿರುದ್ದದ ದೋಷಾರೋಪವನ್ನೇ ರದ್ದುಪಡಿಸಿತು ಎಂದು ಪಿ.ಪಿ.ಹೆಗ್ಡೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಏನಿದು ಪ್ರಕರಣ..?
ಹೊಸನಗರ ಶ್ರೀ ರಾಮಚಂದ್ರಾಪುರ ಮಠದದಲ್ಲಿ ಸೇವೆ ಸಲ್ಲಿಸುತ್ತಿದ್ದರೆನ್ನಲಾದ ಶ್ಯಾಮ ಪ್ರಸಾದ್ ಶಾಸ್ತ್ರಿ ಅವರು ೨೦೧೪ರ ಆಗಸ್ಟ್ ೩೧ರಂದು ಕೋವಿಯಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದರು. ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಮೃತರ ಪತ್ನಿ ಸಂದ್ಯಾ ಲಕ್ಷ್ಮಿ ದೂರು ದಾಖಲಿಸಿದ್ದರು. ಮಠದ ಪರವಾಗಿರುವ ಮಂದಿಯಿಂದ ನಿರಂತರ ಬೆದರಿಕೆ ಕರೆ ಬರುತ್ತಿದ್ದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿ ತನ್ನ ಪತಿ ಸಾವಿಗೆ ಶರಣಾಗಿದ್ದಾರೆಂದು ಅವರು ದೂರಿದ್ದರು. ರಾಜ್ಯಾದ್ಯಂತ ಭಾರೀ ಸುದ್ದಿಯಾದ ಈ ಪ್ರಕರಣದ ತನಿಖೆಯನ್ನು ಆಗಿನ ಸರ್ಕಾರ ಸಿಐಡಿಗೆ ವಹಿಸಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ರಾಘವೇಶ್ವರ ಶ್ರೀ ವಿರುದ್ದದ ಪ್ರಕರಣಗಳಲ್ಲಿ ದಿವಾಕರ ಶಾಸ್ತ್ರಿ ಹಾಗೂ ಪ್ರೇಮಲತಾ ಶಾಸ್ತ್ರಿ ವಿರುದ್ದ ಹೇಳಿಕೆ ನೀಡಲು ಬೋನಂತಾಯ ಶಿವಶಂಕರ ಭಟ್ ಹಾಗೂ ಡಾ.ಪ್ರಭಾಕರ ಭಟ್ ಅವರು ಶ್ಯಾಮಪ್ರಸಾದ್ ಶಾಸ್ತ್ರಿ ಮೇಲೆ ಒತ್ತಡ ಹೇರಿದ್ದು, ನಿರಾಕರಿಸಿದಲ್ಲಿ ತಾವೂ ಬಂಧನಕ್ಕೊಳಗಾಗಬೇಕಾದೀತು ಎಂದು ಬೆದರಿಸಿದ್ದರು. ಇದರಿಂದ ನೊಂದು ಶ್ಯಾಮ್ ಪ್ರಸಾದ್ ಶಾಸ್ತ್ರಿ ಸಾವಿಗೆ ಶರಣಾಗಿದ್ದಾರೆ ಎಂದು ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಹೇಳಿಕೆಗಳನ್ನು ಆಧರಿಸಿ ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್ ಹಾಗೂ ಬೋನಂತಾಯ ಶಿವಶಂಕರ ಭಟ್ ವಿರುದ್ದ ಸಿಐಡಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆದರೆ ತನಿಖಾಧಿಕಾರಿಗಳು ಈ ಆರೋಪ ಸಂಬಂಧ ನಿರ್ದಿಷ್ಟ ಸಾಕ್ಷಿ ಒದಗಿಸಿಲ್ಲ ಎಂದು ವಕೀಲರಾದ ಪಿ.ಪಿ.ಹೆಗ್ಡೆ ಅವರು ಹೈಕೋರ್ಟ್ನಲ್ಲಿ ಬಲವಾಗಿ ವಾದ ಮಂಡಿಸಿದ್ದು, ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಈ ಪ್ರಮುಖರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top